ಮೈಸೂರು: ಮೈಸೂರು – ಕೊಡಗು ಕ್ಷೇತ್ರದಿಂದ ಡಾ. ಯತೀಂದ್ರ ಸಿದ್ದರಾಮಯ್ಯ ತಮ್ಮ ಎದುರಾಳಿಯಾದರೆ ಒಳ್ಳೆಯದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇಂದು ಮೈಸೂರಿನ ಮೃಗಾಲಯ ಎದುರು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ನಾನು ಯಾವತ್ತೂ ನನ್ನ ಎದುರಾಳಿಯನ್ನು ನೋಡಲ್ಲ. ಮೋದಿ ಅವರ ಹೆಸರಿನ ಮುಂದೆ ಯಾವ ಎದುರಾಳಿ ಹೆಸರು ನಡೆಯಲ್ಲ ಎಂದು ಹೇಳಿದರು.
ಮೈಸೂರು- ಕೊಡಗು ಕ್ಷೇತ್ರ ಜೆಡಿಎಸ್ ಪಾಲಾಗಲಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಗೆ ನಮ್ಮ ಚಿಂತೆ ಯಾಕೆ, ತಮ್ಮ ಅಭ್ಯರ್ಥಿ ಯಾರು ಎಂಬುದನ್ನು ನೋಡಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಗೆ ಅಭ್ಯರ್ಥಿಗಳೇ ಇಲ್ಲ. ಅಭ್ಯರ್ಥಿಗಳು ಇಲ್ಲದೆ ಮಂತ್ರಿಗಳನ್ನು ನಿಲ್ಲಿಸುವ ದೈನಾಸಿ ಸ್ಥಿತಿ ಬಂದಿದೆ ಎಂದು ಪ್ರತಾಪ್ ಸಿಂಹ ಟೀಕಿಸಿದರು.
ಬಿಜೆಪಿ-ಜೆಡಿಎಸ್ ನಡುವೆ ಗೊಂದಲ ಇಲ್ಲ, ಈ ಕ್ಷೇತ್ರದಲ್ಲಿ ನನ್ನ ಪರ ಎರಡೂ ಪಕ್ಷದ ನಾಯಕರ ಆಶೀರ್ವಾದ ಇದೆ ಇದು ನನಗೆ ಒಳಿತು ಎಂದು ಹೇಳಿದರು.
ರಾಮ ಜನ್ಮಭೂಮಿಗಾಗಿ ರಥಯಾತ್ರೆ ಮಾಡಿದವರು ಅಡ್ವಾಣಿ. ಕೋರ್ಟ್ ಹೋರಾಟ ಮಾಡಿದವರು ರವಿಶಂಕರ್ ಪ್ರಸಾದ್. ನಂತರ ದೇಶಾದ್ಯಂತ ಈ ಬಗ್ಗೆ ಅಭಿಪ್ರಾಯ ಮೂಡಿಸಿದವರು ಮೋದಿ. ಅಡ್ವಾಣಿಯಿಂದ ಮೋದಿವರೆಗೆ ರಾಮಜನ್ಮ ಭೂಮಿ ವಿಚಾರದಲ್ಲಿ ಬಿಜೆಪಿ ಪಾತ್ರ ದೊಡ್ಡದಿದೆ.
ರಾಮ ಜನ್ಮ ಭೂಮಿ ವಿಚಾರದಲ್ಲಿ ಕಾಂಗ್ರೆಸ್ ದು ಯಾವ ಪಾತ್ರವೂ ಇಲ್ಲ. ಹೀಗಾಗಿ ಅವರಿಗೆ ಅಪರಾಧಿ ಪ್ರಜ್ಞೆ ಇದೆ,ಹಾಗಾಗಿ ಅವರು ಉದ್ಘಾಟನೆಯಿಂದ ಹಿಂದೆ ಸರಿದಿದ್ದಾರೆ ಎಂದು ಟಾಂಗ್ ನೀಡಿದರು.
ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದ ಕಾಂಗ್ರೆಸ್, ಪಾಪ ತೊಳೆದುಕೊಳ್ಳಲು ಸಿದ್ದರಾಮಯ್ಯ ಅವರು ತಮ್ಮ ಶಿಷ್ಯರ ಜೊತೆ ಅಯೋಧ್ಯೆಗೆ ಹೋಗಿ ಬರಲಿ ಎಂದು ಪ್ರತಾಪ್ ಸಿಂಹ ವ್ಯಂಗ್ಯ ಭರಿತ ಸಲಹೆ ನೀಡಿದರು.
ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ, ನಿಯೋಜಿತ ಉಪ ಮೇಯರ್ ರೂಪಾ ಮತ್ತಿತರರು ಹಾಜರಿದ್ದರು.

