ಮೋದಿ ಅವರಿಂದ ಕಾವೇರಿ ಸಂಕಷ್ಟಕ್ಕೆ ಪರಿಹಾರ ಸಾಧ್ಯ: ಹೆಚ್.ಡಿ.ದೇವೇಗೌಡ

ಬೆಂಗಳೂರು: ಕರ್ನಾಟಕ ಎದುರಿಸುತ್ತಿರುವ ಕಾವೇರಿ ಜಲ ಸಂಕಷ್ಟವನ್ನು ಪರಿಹಾರ ಮಾಡುವ ಶಕ್ತಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಹೇಳಿದರು.

ಈ ಲೋಕಸಭಾ ಚುನಾವಣೆ ಮುಗಿದ ನಂತರ ಮತ್ತೆ ಪ್ರಧಾನಿ ಆಗಲಿರುವ ಅವರು, ಈ ಜಲ ಸಂಕಷ್ಟಕ್ಕೆ ಪರಿಹಾರ ನೀಡಲಿದ್ದಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಪ್ರತಿ ವರ್ಷ ತಮಿಳುನಾಡು ರಾಜ್ಯದವರು ಕಾವೇರಿ ಜಲ ನಿರ್ವಹಣಾ ಸಮಿತಿ ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮುಂದೆ ಕರ್ನಾಟಕದಿಂದ ನೀರು ಕೊಡಿಸಿ ಎಂದು ಅರ್ಜಿ ಹಾಕುತ್ತಾರೆ ಎಂದು ‌ಹೇಳಿದರು.

ನಮ್ಮ ಬಳಿ ನೀರು ಇಲ್ಲದೆ ಇದ್ದರೂ ನೀರು ಬಿಡಿ ಅಂತಾರೆ. ನಮ್ಮ ಅಧಿಕಾರಿಗಳು ಏನೇ ವಾದ ಮಾಡಿದರೂ ಪ್ರಯೋಜನ ಆಗಿಲ್ಲ. ಕಾವೇರಿ ಪ್ರಾಧಿಕಾರದವರು ಎಂದೂ ನಮ್ಮ ರಾಜ್ಯಕ್ಕೆ ಬಂದು ನೀರು ಎಷ್ಟಿದೆ ಎಂಬುದನ್ನ ನೋಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾವೇರಿ ಸಮಸ್ಯೆಗೆ ಪರಿಹಾರ ಇದೆ. ಪ್ರಧಾನಿ ಮೋದಿ ಅವರಿಗೆ ನಮಗೆ ಆಗಿರುವ ಅನ್ಯಾಯ ಮನ ಮುಟ್ಟುವಂತೆ ನಾವು ಒಟ್ಟಾಗಿ ಹೋರಾಡಬೇಕು ಎಂದು ದೇವೇಗೌಡರು ಕರೆ ನೀಡಿದರು.

ಇದರಲ್ಲಿ ರಾಜಕೀಯ ಇರಬಾರದು. ರಾಜಕೀಯ ಪಕ್ಷಗಳು ಒಟ್ಟಾಗಿ ಹೋರಾಟ ಮಾಡಬೇಕು. ನಾನು ಇನ್ನೂ ಎರಡೂವರೆ ವರ್ಷ ರಾಜ್ಯಸಭೆಯಲ್ಲಿ ಇರುತ್ತೇನೆ. ಹೊರಾಡುತ್ತೇನೆ,ನಮ್ಮ ರಾಜ್ಯದ ಜನರಿಗೆ ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ. ನನ್ನ ಕೊನೆಯುಸಿರು ಇರುವತನಕ ಹೋರಾಟ ಮಾಡುತ್ತೇನೆ ಎಂದು ಕಡಕ್ಕಾಗಿ ಹೇಳಿದರು.

ತಮಿಳುನಾಡಿನವರಿಗೆ ಶಕ್ತಿ ಇದೆ,ಹೀಗಾಗಿ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ನ್ಯಾಯ ಕೊಡಬೇಕಾದ ಕಾವೇರಿ ಪ್ರಾಧಿಕಾರ ನಮಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದೆ. ಹೈಡ್ರೋ ಪವರ್ ಜನರೇಷನ್, ಕುಡಿಯುವ ನೀರಿನ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಸಮಿತಿ ಅಧ್ಯಕ್ಷರು ಭುವನೇಶ್ವರದಿಂದ ಸಭೆ ಪ್ರಾರಂಭ ಮಾಡಿ ನಮ್ಮ ರಾಜ್ಯಕ್ಕೆ ಬಂದಿದ್ದರು. ನಮ್ಮ ರಾಜ್ಯದಿಂದ ನಾನು, ಡಿ.ಕೆ.ಸುರೇಶ್, ಶಿವಕುಮಾರ್ ಉದಾಸಿ ಸದಸ್ಯರು. ಮೊದಲ ಸಭೆಯಲ್ಲಿ ನಾನು, ಡಿ.ಕೆ.ಸುರೇಶ್, ಉದಾಸಿ ಭಾಗವಹಿಸಿದ್ದೆವು ಎಂದು ಅವರು ಮಾಹಿತಿ ನೀಡಿದರು.

ಮೇಕೆದಾಟು ಯೋಜನೆಗೆ ಕೂಡಲೇ ಅನುಮತಿ ಕೊಡುವಂತೆ ಮನವಿ ಮಾಡಿದ್ದೇವೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ, ಮೇಕೆದಾಟು ಕುಡಿಯುವ ನೀರಿನ‌ ಯೋಜನೆ ಅನುಷ್ಠಾನಕ್ಕೆ ತಂದರೆ ಮಾತ್ರ ನಗರದ ನೀರಿನ ಬವಣೆ ತಪ್ಪಿಸಬಹುದು. ಇಲ್ಲವಾದರೆ, ಬೆಂಗಳೂರು ನಗರ ಅತಿ ದೊಡ್ಡ ಜಲ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ ಎಂದು ಮಾಜಿ ಆತಂಕ ವ್ಯಕ್ತಪಡಿಸಿದರು.

ಕಾವೇರಿ ಜಲ ವಿವಾದ ಮಂಡಳಿ ಏಕಪಕ್ಷೀಯವಾಗಿ 1991ರಲ್ಲಿ ಮಧ್ಯಂತರ ಆದೇಶ ನೀಡಿ, ಕರ್ನಾಟಕ ರಾಜ್ಯ ತನ್ನ ನೀರಾವರಿ ಅಚ್ಚುಕಟ್ಟನ್ನು 11.20 ಲಕ್ಷ ಹೆಕ್ಟೇರ್ ಗೆ ಸೀಮಿತಗೊಳಿಸುವಂತೆ ಮತ್ತು ತಮಿಳುನಾಡಿನ 205 ಟಿಎಂಸಿ ನೀರನ್ನು ಬಿಡುಗಡೆ ‌ಮಾಡುವಂತೆ ಆದೇಶಿಸಿರುವುದರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ದೇವೇಗೌಡರು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿಟಿ ದೇವೆಗೌಡ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್. ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ ಹಾಜರಿದ್ದರು.