ಕಾಂಗ್ರೆಸ್ ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟಿದೆ;ಒಂದು ಧರ್ಮ , ಒಂದು ಜಾತಿ ಪರ ಇರಲು ನಾವು ಬಿಜೆಪಿ ಅಲ್ಲ-ಸಿದ್ದು

ದೇವದುರ್ಗ: ಕಾಂಗ್ರೆಸ್ ಪಕ್ಷ ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದು, ಒಂದು ಧರ್ಮ , ಒಂದು ಜಾತಿಯ ಪರವಾಗಿರಲು ನಾವು ಬಿಜೆಪಿ ಅಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ದೇವದುರ್ಗದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ನಾವು ಎಲ್ಲಾ ಧರ್ಮ, ಎಲ್ಲಾ ಜಾತಿಯವರ ಪರವಾಗಿ ಇರುವವರು ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಮಾಜ ವಿಭಜನಾ ಹೇಳಿಕೆಗೆ ಉತ್ತರಿಸಿ, ಸಮಾಜದಲ್ಲಿನ ಎಲ್ಲಾ ಜಾತಿ, ಧರ್ಮದ ಪರವಾಗಿ ನಾವಿದ್ದೇವೆ. ಕೇವಲ ಒಂದು ಜಾತಿ, ಧರ್ಮದ ಪರವಾಗಿರಲು ನಾವು ಬಿಜೆಪಿ ಅಲ್ಲ. ಧರ್ಮದ ಆಧಾರದ ಮೇಲೆ ಸಮಜವನ್ನು ಒಡೆಯುವವರಲ್ಲ. ನಾವು ಜಾತ್ಯಾತೀತ ತತ್ವ ಹಾಗೂ ಧರ್ಮನಿರಪೇಕ್ಷತೆಯಲ್ಲಿ ನಂಬಿಕೆಯುಳ್ಳವರು. ಕಾಂಗ್ರೆಸ್ ಜಾತ್ಯಾತೀತ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಮಾಜಿ ಶಾಸಕ ಯತೀಂದ್ರ ಅವರನ್ನು ಕಣಕ್ಕಿಳಿಸಿದರೆ ಸ್ವಾಗತಿಸುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನಾಗಲಿ, ಯತೀಂದ್ರ ಆಗಲಿ ಈ ರೀತಿ ಹೇಳಿಲ್ಲ. ಪ್ರತಾಪ್ ಸಿಂಹ ಅವರಿಗೆ ಸೋಲುತ್ತೇನೆ ಎಂದು ಹೆದರಿಕೆ ಶುರುವಾಗಿದೆ ಹಾಗಾಗಿ ಏನೇನೋ ಹೇಳಿಕೆ ನೀಡುತ್ತಾರೆ‌ ಎಲ್ಲಾ ಊಹಾಪೋಹಗಳು ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.

ಅಯೋಧ್ಯೆ ಗೆ 22 ರ ನಂತರ ತೆರಳುವಿರಾ ಎಂಬ ಪ್ರಶ್ನೆಗೆ, ನಾನು ಹೋಗಲ್ಲ ಎಂದು ಎಲ್ಲಿಯೂ ಹೇಳಿಲ್ಲ ಎಂದರು.

ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪ್ರತಿಮೆ ಸ್ಥಾಪನೆಗೆ ನಮ್ಮದೇನೂ ವಿರೋಧವಿಲ್ಲ. ಆದರೆ ರಾಜಕೀಯ
ಮಾಡಬಾರದು. 22 ರಂದು ರಾಜಕೀಯವಾಗಿ ಉದ್ಘಾಟನಾ ಸಭೆಯನ್ನು ಬಳಸಲು ಹೊರಟಿದ್ದಾರೆ. ಅದನ್ನು ನಾವು ವಿರೋಧಿಸುತ್ತೇವೆಯೇ ಹೊರತು ಶ್ರೀ ರಾಮಚಂದ್ರನ ವಿರೋಧಿಗಳಲ್ಲ. ನಾನು ಎಲ್ಲಿಯೂ ಅಯೋಧ್ಯೆಗೆ ಹೋಗುತ್ತೇನೆ ಅಥವಾ ಹೋಗುವುದಿಲ್ಲ ಎಂದು ಹೇಳಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.