ಮೈಸೂರು: ಮೂಡಾ ಹಗರಣಕ್ಕಿಂತ ಬಹುದೊಡ್ಡದಾದ ಹಗರಣ ಮೈಸೂರಿನ ಬಂಡಿಪಾಳ್ಯದಲ್ಲಿರುವ ಎಪಿಎಂ ಸಿಯಲ್ಲಿ ನಡೆದೆದಿದೆ ಎಂದು ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಆರೋಪಿಸಿದರು.
ಸುದ್ದಿಗೋಷ್ಠಿಲ್ಲಿಯಲ್ಲಿ ಮಾತನಾಡಿದ ಅವರು
ಮೈಸೂರಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾರಂಭವಾದದ್ದು 1995-98ರ ದಶಕದಲ್ಲಿ. ಇದನ್ನು ಸ್ಥಾಪಿಸಿದ ಉದ್ದೇಶ ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಲಿ ಹಾಗೂ ಸಗಟು ಅಂದರೆ ಹೋಲ್ ಸೇಲ್ ಮಾರಾಟಗಾರರಿಗೆ, ಅದರಲ್ಲೂ ವಿಶೇಷವಾಗಿ, ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ತಂದು ಇಲ್ಲಿ ಸಗಟು ಮಾರಾಟ ಮಾಡಲು ಅನುಕೂಲವಾಗಲೆಂಬುದಾಗಿ ಎಂದು ತಿಳಿಸಿದರು
ಹಳೆ ಸಂತೆಪೇಟೆಯಲ್ಲಿ ಆರ್ ಎಂ ಸಿ ಲೈಸೆನ್ಸ್ ಹೊಂದಿರುವ ಹಾಗೂ ಆರ್ ಎಂ ಸಿ ತೆರಿಗೆ ಶುಲ್ಕ (ಸೆಸ್) ಪಾವತಿಸಿ ಕೊಂಡು ಬಂದಿರುವ ಸಗಟು ವ್ಯಾಪಾರಿಗಳಿಗೆ ಬಂಡಿಪಾಳ್ಯ ಎಪಿಎಂಸಿ ಆವರಣದಲ್ಲಿ ವ್ಯಾಪಾರ, ವಹಿವಾಟು ನಡೆಸಲು ಖಾಲಿ ನಿವೇಶನಗಳನ್ನು ಜೇಷ್ಠತೆಯ ಆದಾರದ ಮೇಲೆ ಹಂಚಿಕೆ ಮಾಡಲಾಗಿದೆ, ಹಂಚಿಕೆಯಾದ ನಿವೇಶನದಲ್ಲಿ ಎಪಿಎಂಸಿ ಕಚೇರಿಯಿಂದ ಮಂಜೂರು ಮಾಡಿರುವ ನಕ್ಷೆ, ಪ್ಲಾನ್ ಪ್ರಕಾರವೇ ಪರಿಪೂರ್ಣವಾದ ಸಂಪೂರ್ಣ ಕಟ್ಟಡವನ್ನು ವ್ಯಾಪಾರಿಗಳು ನಿರ್ಮಿಸಬೇಕಾಗಿ ಷರತ್ತು ವಿಧಿಸಿ, ಎಪಿಎಂಸಿ ಮಂಜೂರು ಮಾಡಲಾಗಿದೆ.
ಆದರೆ ಈಗ ನಿವೇಶನ ಪಡೆದ ವ್ಯಾಪಾರಿಗಳು ಎಪಿಎಂಸಿ ಇಲಾಖೆಯ ನಕ್ಷೆ ,ಪ್ಲಾನ್, ಕಾಯ್ದೆ, ನಿಯಮದ ಆಶೋತ್ತರಗಳಿಗೆ ವಿರುದ್ಧವಾಗಿ, ನಿವೇಶನವನ್ನು ಹಲವಾರು ಭಾಗಗಳನ್ನಾಗಿ ವಿಂಗಡಿಸಿ, ಮಳಿಗೆಗಳನ್ನು ನಿರ್ಮಿಸಿ ಅಧಿಸೂಚಿತವಲ್ಲದ ವ್ಯಾಪಾರ ವಹಿವಾಟು ನಡೆಸಲು, ಕಾನೂನು ಬಾಹಿರವಾಗಿ ಬಾಡಿಗೆಗೆ ನೀಡಿರುವುದು ಕಂಡುಬಂದಿದೆ. ಈ ಅಕ್ರಮವನ್ನು ಎಪಿಎಂಸಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ತಡೆಯದೆ ಎಪಿಎಂಸಿಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪ್ರತಿ ತಿಂಗಳು ಮಳಿಗೆದಾರದಿಂದ ಲಕ್ಷಾಂತರ ರೂ ಹಫ್ತಾ ತೆಗೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪ್ರತಿದಿನ ಸಲ್ಲಬೇಕಾದ ಲಕ್ಷಾಂತರ ಎಪಿಎಂಸಿ ಶುಲ್ಕ (ಸೆಸ್) ಪಾವತಿಯಾಗದೆ ನಷ್ಟವನ್ನುಂಟು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಎಪಿಎಂಸಿ ಲೈಸೆನ್ಸ್ ಹೊಂದಿರುವ ವ್ಯಾಪಾರಿಯು ಸತತವಾಗಿ ಮೂರು ವರ್ಷ ಗಳು ವ್ಯಾಪಾರ, ವಹಿವಾಟು ನಡೆಸದೆ ಹಾಗೂ ಆರ್‌ಎಂಸಿ ಶುಲ್ಕ (ಸೆಸ್) ಪಾವತಿಸದೆ ಇದ್ದಲ್ಲಿ, ಎಪಿಎಂಸಿಯು ವ್ಯಾಪಾರಿಗೆ ನೀಡಿರುವ ಲೈಸೆನ್ಸ್ ಅನ್ನು ರದ್ದುಪಡಿಸಿ ನಿವೇಶನದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಪೂರ್ಣ ಅಧಿಕಾರ ಹೊಂದಿದೆ ಎಂದು ಗುತ್ತಿಗೆಯ ಕರಾರು ಒಪ್ಪಂದ ಪತ್ರದಲ್ಲಿ ತಿಳಿಸಿರುತ್ತದೆ. ನಿವೇಶನಗಳಲ್ಲಿ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ವಿಭಜಿಸಬಾರದು, ಬೇರೆಯವರಿಗೆ ಬಾಡಿಗೆಗೆ ನೀಡಬಾರದು ಹಾಗೂ ಇನ್ನಿತರ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು ಜೊತೆಗೆ ಕಟ್ಟಡದಲ್ಲಿ ಒಂದಕ್ಕಿಂತ ಹೆಚ್ಚಿನ ವಿದ್ಯುತ್ ಮೀಟರ್ ಇರಬಾರದೆಂದು ನಿಯಮವಿದೆ.
ಮೈಸೂರಿನ ಸ್ಥಳೀಯ ರೈತರ ಭೂಮಿಯನ್ನು ವಶಪಡಿಸಿಕೊಂಡು ಇಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆಯಾಗಿದೆ. ಈಗ ನೋಡಿದರೆ ಸ್ಥಳೀಯ ಸಗಟು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ನಿವೇಶನವನ್ನು ಮಂಜೂರು ಮಾಡದೆ, ಲಕ್ಷಾಂತರ ರೂ ಲಂಚ ನೀಡಿರುವ ಹಾಗೂ ಜ್ಯೇಷ್ಠತೆ ಹೊಂದಿಲ್ಲದವರಿಗೆ ಅಕ್ರಮವಾಗಿ, ಚಿಲ್ಲರೆ ದಿನಸಿ ವ್ಯಾಪಾರಿಗಳಿಗೆ, ತಂಬಾಕು ಉತ್ಪನ್ನ ವ್ಯಾಪಾರಿಗಳಿಗೆ, ಪ್ಲಾಸ್ಟಿಕ್ ವ್ಯಾಪಾರಿಗಳಿಗೆ, ಕಬ್ಬಿಣದ ವ್ಯಾಪಾರಿಗಳಿಗೆ, ತಂಪು ಪಾನೀಯ ವ್ಯಾಪಾರಿಗಳಿಗೆ ಹಾಗೂ ಇನ್ನಿತರ ಎಪಿಎಂಸಿ ಕಾಯ್ದೆಯ ವ್ಯಾಪ್ತಿಗೆ ಒಳಪಡದ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ನಿವೇಶನವನ್ನು ಮಂಜೂರು ಮಾಡಲಾಗಿದೆ ಎಂದು ತೇಜೇಶ್ ದೂರಿದರು.
ಎಪಿಎಂಸಿಯಿಂದ ಈಗ ಮಂಜೂರಾಗಿರುವ 80 ಭಾಗ ನಿವೇಶನಗಳು ಅಕ್ರಮವಾಗಿ ಎಪಿಎಂಸಿ ಕಾಯ್ದೆ, ನಿಯಮಾವಳಿಗಳನ್ನು ಗಾಳಿಗೆ ತೂರಿ, ಎಪಿಎಂಸಿಗೆ ಸಂಬಂಧಪಡದ ವ್ಯಾಪಾರವನ್ನೇ ಮಾಡದವರಿಗೂ, ಹಲವಾರು ಪ್ರಭಾವಿ ರಾಜಕಾರಣಿಗಳ ಹಾಗೂ ಅವರ ಹಿಂಬಾಲಕರುಗಳಿಗೆ ಮಂಜೂರಾಗಿದೆ.ಇದು ಅನ್ಯಾಯ ಎಂದು ಹೇಳಿದರು.
ಇದರಿಂದಾಗಿ ಸ್ಥಳೀಯರಿಗೆ, ಜೇಷ್ಠತೆ ಹೊಂದಿರುವವರಿಗೆ ನ್ಯಾಯಯುತವಾಗಿ ದೊರಕಬೇಕಾಗಿದ್ದ ನಿವೇಶನಗಳನ್ನು ನೀಡದೆ ಎಪಿಎಂಸಿ ಅಧಿಕಾರಿಗಳು ಅನ್ಯಾಯ
ಎಸಗಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಈ ಅಕ್ರಮಗಳನ್ನು ಮುಚ್ಚಿ ಹಾಕಲು ಎಪಿಎಂಸಿಯಲ್ಲಿ ಈಗ ಚಿಲ್ಲರೆ ವ್ಯಾಪಾರಿಗಳಿಗೂ ವ್ಯಾಪಾರ ಮಾಡಲು ಅವಕಾಶ ಕುರಿತು ಕಾಯ್ದೆಯನ್ನೇ ತಿದ್ದುಪಡಿ ಮಾಡುವ ತರಾ-ತುರಿಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ದರು.
ಕೂಡಲೇ ಜೇಷ್ಠತೆ ಇಲ್ಲದ, ಎಪಿಎಂಸಿಗೆ ಒಳಪಡದ ವಸ್ತುಗಳನ್ನು ಮಾರಾಟ ಮಾಡುತ್ತಿರುವ,ಅಕ್ರಮ ಕಾನೂನು ಬಾಹಿರವಾಗಿರುವ ವ್ಯಾಪಾರ ಮಳಿಗೆಗಳನ್ನು ಎಪಿಎಂಸಿ ಅಧಿಕಾರಿಗಳು ಹಾಗೂ ಸರ್ಕಾರ ತೆರವುಗೊಳಿಸಬೇಕು,ತಕ್ಷಣ ಆದೇಶವನ್ನು ಹೊಡಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸೇನಾ ಪಡೆಯ ದಯಾನಂದ್ ಎಂ ವಿ, ರಾಜ್ಯ ರೈತಸಂಘದ ವರಕೂಡು ಕೃಷ್ಣೇಗೌಡ, ಸಿಂದುವಳ್ಳಿ ಶಿವಕುಮಾರ್, ಹನುಮಂತಯ್ಯ ಹಾಗೂ ಶಿವರಾಂ ಗೌಡ ಉಪಸ್ಥಿತರಿ ದ್ದರು.
,

