ಮೈಸೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ಸರ್ಕಾರ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಇದೊಂದು ಹುಚ್ಚು, ಮೂರ್ಖತನದ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾತನಾಡಿದ ಅವರು, ಉಚಿತ ಬಸ್ ಪ್ರಯಾಣದಿಂದ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಅದೋಗತಿಗೆ ತಲುಪಿದೆ ಎಂದು ಹೇಳಿದರು.
16 ಬಾರಿ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ತಮ್ಮ ವೈಯಕ್ತಿಕ ಚಪಲ ಗ್ಯಾರಂಟಿಗಳಿಂದ ಸರ್ಕಾರ ಅಧೋಗತಿ ತಲುಪುವಂತಾಗಿದೆ ಎಂದು ದೂರಿದರು.
ಉಚಿತ ಗ್ಯಾರಂಟಿಗಳಿಂದ ಕುಟುಂಬಗಳಲ್ಲಿ ಒಡಕು ಉಂಟಾಗಿದೆ. ಗಂಡ ಹೆಂಡತಿಯರ ನಡುವೆ ಒಡಕು ಉಂಟಾಗಿದೆ. ಅವರವರಲ್ಲೇ ಗಲಾಟೆ ತಂದಿಟ್ಟಿದ್ದಾರೆ. ಬೇಕಾದರೆ ಒಂದು ಸರ್ವೆ ಮಾಡಿಸಿ,ಇದಕೊಂದು ಮಾನ ದಂಡ ಬೇಡವಾ ಎಂದು ಪ್ರಶ್ನಿಸಿದರು.
ವೃದ್ಧಾಪ್ಯ ವೇತನಕ್ಕೂ ಒಂದು ಮಾನ ದಂಡ ಇದೆ. ಸಾಲ ಮಾಡಿ ಉಚಿತ ಕೊಡುವ ಅಗತ್ಯ ಇತ್ತಾ, ಒಂದು ಮಾನದಂಡದ ಆಡಿಯಲ್ಲಿ ಕೊಡಿ. ಇದೊಂದು ಹುಚ್ವು ಸರ್ಕಾರ, ಯಾವುದೇ ಮಾನದಂಡವಿಲ್ಲದೆ ಎಲ್ಲರಿಗೂ ಕೊಡುತ್ತೇವೆ ಎನ್ನುವುದು ಸರ್ಕಾರದ ಮೂರ್ಖತನ ಎಂದು ತಿಳಿಸಿದರು.
ಇಲ್ಲಿವರೆಗೆ 76 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದರೆ ಆ ಹಣದಿಂದ ಎಷ್ಟು ಯೋಜನೆಗಳನ್ನು ಮಾಡಬಹುದಿತ್ತು. 76 ಸಾವಿರ ಕೋಟಿ ಖರ್ಚು ಮಾಡಿದ್ದರ ಫಲ ಏನು, ಆರ್ಥಿಕ ಶಿಸ್ತು ಸರ್ಕಾರದಲ್ಲಿ ಇಲ್ಲ ಎಂದು ಕಿಡಿಕಾರಿದರು.
ದುಡಿಯುವ ಕೈಗೆ ಕೆಲಸ ಕೊಡಿ.2013 ರಲ್ಲಿ ಜನಪರ ಕಾರ್ಯಕ್ರಮಗಳ ಅಂಶಗಳ ಪಟ್ಟಿ ತಯಾರಿಸಿದ್ದೇ ನಾವು. ಆರು ಪ್ರೋಗ್ರಾಂ ನಾವು ಕೊಟ್ಟಿದ್ದು ನಾನು ,ರಮೇಶ್ ಕುಮಾರ್, ಇಬ್ರಾಹಿಂ. ಅನ್ನಭಾಗ್ಯ ಕಲ್ಪನೆ ನಾವು ಕೊಟ್ಟಿದ್ದು,ಅದೆಲ್ಲಾ ಸಿದ್ದರಾಮಯ್ಯ ತಲೆಯಲ್ಲಿ ಇರಲಿಲ್ಲ ಎಂದು ವಿಶ್ವನಾಥ್ ತಿಳಿಸಿದರು.
ಆಗ ಅವರು ಉತ್ತಮ ಜನಪರ ಆಡಳಿತ ಕೊಟ್ಟರು.ಆದರೆ ಈಗ ಸಿಎಂ ಸಿದ್ದರಾಮಯ್ಯ ಸರಿಯಾಗಿ ಆಡಳಿತ ನಡೆಸುತ್ತಿಲ್ಲ ಎಂದು ಆರೋಪಿಸಿದ ಹಳ್ಳಿಹಕ್ಕಿ, ದುಡಿಯುವ ಕೈಗೆ ಕೆಲಸ ಕೊಡಿ ಎಂದು ಒತ್ತಾಯಿಸಿದರು.
ಸದನದಲ್ಲಿ ಸಿಎಂ ಸಿದ್ದರಾಮಯ್ಯಗೆ ಬೆಲೆ ಇಲ್ಲದಂತಾಗಿದೆ. ವ್ಹೀಲ್ ಚೇರನಲ್ಲಿ ಕೂತು ಆಡಳಿತ ನಡೆಸಲಿಕ್ಕೆ ಆಗಲ್ಲ. ಸದನದಲ್ಲಿ ನಡೆದ ಘಟನೆ ನಾಚಿಕೆಗೇಡು. ಮಾನ ಮರ್ಯಾದೆ ಇರುವವರು ಸದನದಲ್ಲಿ ಇರೋಕಾಗುತ್ತಾ. ಮಧುಬಲೆಯಲ್ಲಿ 48 ಜನ ಇದ್ದಾರೆ ಎಂದು ಕಾಂಗ್ರೆಸ್ ನವರೇ ಹೇಳಿದ್ದಾರೆ. ಅದನ್ನ ಯಾರು ಅಂತ ಹೊರ ತಗೆಯುವ ಕೆಲಸ ವಿಪಕ್ಷದವರೂ ಮಾಡಲಿಲ್ಲ. ಎರಡೂ ಪಕ್ಷಗಳೂ ದಿವಾಳಿಯಾಗಿವೆ ಎಂದು ಸ್ವಪಕ್ಷ ಹಾಗೂ ಆಡಳಿತ ಪಕ್ಷಗಳ ವಿರುದ್ಧ ವಿಶ್ವನಾಥ್ ಅಸಮಧಾನ ವ್ಯಕ್ತಪಡಿಸಿದರು.
ವಿಶ್ವನಾಥ್ ರಾಜಕೀಯದಲ್ಲಿ ನನಗಿಂತ ಹಿರಿಯರು, ನಾನು ಎಂಎಲ್ಎ ಆಗೋಕಿಂತ ಮುಂಚಿತವಾಗಿ ಆದರು, ಆದರೆ ನಾನು ಸಿಎಂ ಆದೆ ಅವರು ಆಗಲಿಲ್ಲ ಎಂದು ಸದನದಲ್ಲಿ ಸಿದ್ದರಾಮಯ್ಯ ಕಿಚಾಯಿಸಿದ್ದರ ಕುರಿತು ಮಾತನಾಡಿದ ವಿಶ್ವನಾಥ್, ಹೌದಪ್ಪ ನಾನು ನೀನು ಒಟ್ಟಿಗೆ ಓದಿದ್ದೆವು, ಒಟ್ಟಿಗೆ ವಕೀಲ ವೃತ್ತಿ ಆರಂಭಿಸಿದ್ದೆವು. ನಾನು ಮೊದಲು ಎಂಎಲ್ಎ ಆದೆ, ನಿನ್ನನ್ನ ಕಾಂಗ್ರೆಸ್ ಗೆ ಕರೆದಂದದ್ದು ನಾನು, ಕಾಂಗ್ರೆಸ್ ಗೆ ಕರೆ ತರದಿದ್ದರೆ ಹೇಗೆ ಸಿಎಂ ಆಗುತ್ತಿದ್ರಿ ಎಂದು ಟಾಂಗ್ ನೀಡಿದರು.
ನಮ್ಮ ಬಿಜೆಪಿಗೆ ಆಡಳಿತವೂ ಗೊತ್ತಿಲ್ಲ, ವಿರೋಧ ಪಕ್ಷ ಸ್ಥಾನ ನಿಭಾಯಿಸೋದು ಗೊತ್ತಿಲ್ಲ, ಕೇಳೊ ತಾಕತ್ತೂ ಇಲ್ಲ ಎಂದು ಗುಡುಗುದರು.
ಬಿಜೆಪಿ ಕಾಂಗ್ರೆಸ್ ಹೊಂದಾಣಿಕೆ ಹೆಚ್ಚಾಗಿದೆ ಆದ್ದರಿಂದಲೇ ವಿಜಯೇಂದ್ರ ಗೆದ್ದಿದ್ದು ಎಂದು ವಿಶ್ವನಾಥ್ ಮಾರ್ಮಿಕವಾಗಿ ನುಡಿದರು.