ಚಾಮರಾಜನಗರ: ಕರ್ತವ್ಯದಲ್ಲಿದ್ದಾಗಲೇ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಆಲಬಾವಿ ಗ್ರಾಮದ ಪರಶುರಾಮ್ (31) ಮೃತಪಟ್ಟ ಕಾನ್ಸ್‌ಟೇಬಲ್.
ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪರಶುರಾಮ್ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಮೂರು ತಿಂಗಳಿನಿಂದ ಕರ್ತವ್ಯ ಮಾಡುತ್ತಿದ್ದರು.
ಶನಿವಾರ ಬೆಳಗ್ಗೆ ಸಹೋದ್ಯೋಗಿಗಳ ಜೊತೆ ಚೆನ್ನಾಗಿಯೇ ಮಾತನಾಡಿಕೊಂಡು ಕರ್ತವ್ಯದಲ್ಲಿ ಪಾಲ್ಗೊಂಡಿದ್ದರು.
ಆದರೆ ಬೆಳಗ್ಗೆ 11.45 ರ ವೇಳೆಯಲ್ಲಿ ಹೃದಯಘಾತ ಸಂಭವಿಸಿದೆ. ತಕ್ಷಣ ಸಹೋದ್ಯೋಗಿಗಳು ರಾಮಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರು ಜಿಲ್ಲಾಸ್ಪತ್ರೆಗೆ ಕರೆದ್ಯೂಯುವಂತೆ ಸಲಹೆ ನೀಡಿದ್ದಾರೆ.
ಕಾರಿನಲ್ಲಿ ಚಿಕಿತ್ಸೆಗೆ ಕರೆ ತರುತ್ತಿದ್ದಾಗಲೇ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.ನಂತರ ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇಟ್ಟು ಸಹೋದ್ಯೋಗಿಗಳು ಅಂತಿಮ ದರ್ಶನ ಪಡೆದ ಬಳಿಕ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಪರಶುರಾಮ್ ಅವರು ಬೈಕ್ ಮೇಲೆ ಕುಳಿತು ಮೊಬೈಲ್ನಲ್ಲಿ ಮಾತನಾಡುತ್ತಿರುವಾಗಲೇ ಏಕಾಏಕಿ ಕುಸಿದುಬಿದ್ದರು ಎಂದು ಸಹೋದ್ಯೋಗಿಯೊಬ್ಬರು ಮಾಹಿತಿ ನೀಡಿದ್ದಾರೆ.