ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆ ಮೈದಾನದಲ್ಲಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಈ ಯೋಗ ದಿನಾಚರಣೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಯೋಗ ದಿನಾಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮೈಸೂರು ಯೋಗಕ್ಕೆ ಪ್ರಸಿದ್ಧ ವಾಗಿದೆ, ಈ ಕಾರ್ಯಕ್ರಮಕ್ಕೆ ಹೆಚ್ಚು ಸಾರ್ವಜನಿಕರು ಭಾಗವಹಿಸುವುದು ಮುಖ್ಯವಾಗಿದೆ ಅಂದು ಬೆಳಿಗ್ಗೆ 6 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ,15 ಸಾವಿರ ಯೋಗಪಟುಗಳು ಭಾಗವಹಿಸಲಿದ್ದಾರೆ, ಸರ್ಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಸಲಾಗುವುದು, ಇದಕ್ಕೆ ಬೇಕಾದ ಸಿದ್ಧತೆಯನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಯೋಗದಲ್ಲಿ ಭಾಗವಹಿಸುವವರು ಟೀ ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್ ಧರಿಸಿರಬೇಕು. ಯೋಗ ಮ್ಯಾಟ್ ಅವರೇ ತರಬೇಕು. ಜೂನ್ 15 ರಂದು ಪೂರ್ವಾಭ್ಯಾಸ ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದು ಎಂದು ಹೇಳಿದರು.
ಜೆ.ಎಸ್.ಎಸ್ ಸಂಸ್ಧೆ, ಸಿಸ್ಮಾಮ್ ಸ್ಕೂಲ್ ಮ್ಯಾನೆಂಜಮೆಂಟ್, ಯೋಗ ಫೆಡರೇಷನ್, ಯೋಗ ಒಕ್ಕೂಟ, ಯೋಗ ತರಬೇತಿ ಸಂಸ್ಥೆ, ಎನ್.ಸಿ.ಸಿ, ಎನ್.ಎಸ್.ಎಸ್ ಹಾಗೂ ಶಾಲಾ ಕಾಲೇಜುಗಳಿಂದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಯೋಗ ನಡೆಯುವ ಸ್ಥಳದಲ್ಲಿ ಆಂಬುಲೆನ್ಸ್, ಫೈಯರ್, ಕುಡಿಯುವ ನೀರು ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಒದಗಿಸಬೇಕು. ಮಹಾನಗರ ಪಾಲಿಕೆಯಿಂದ ಸ್ವಚ್ಚತೆ ಹಾಗೂ ನೀರಿನ ವ್ಯವಸ್ಥೆ,
ಕೆ.ಎಸ್.ಆರ್.ಟಿ.ಸಿ ವತಿಯಿಂದ ಯೋಗಾಸಕ್ತರಿಗೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಡಾ.ಪಿ.ಶಿವರಾಜ್ ಸೂಚಿಸಿದರು.
ಅರಮನೆ ಮಂಡಳಿಯಿಂದ ಅರಮನೆ ಆವರಣದಲ್ಲಿ ಸ್ಥಳಾವಕಾಶ ವ್ಯವಸ್ಥೆ ಹಾಗೂ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯಲು ಹೆಚ್ಚಿನ ಸ್ವಯಂ ಸೇವಕರನ್ನು ನೇಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳವಂತೆ ತಿಳಿಸಿದರು.
ಯೋಗದಲ್ಲಿ ಭಾಗವಹಿಸಿದವರಿಗೆ ಸರ್ಟಿಫಿಕೇಟ್ ನೀಡಬೇಕು. ಕಾರ್ಯಕ್ರಮಕ್ಕೆ ಅಗತ್ಯವಾದ ಪ್ರಚಾರ ನೀಡುವಂತೆ ಅಪರ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯೋಗ ದಿನದ ಪ್ರಚಾರ ಸಾಮಗ್ರಿಯನ್ನು ಅಪರ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.
ಸಭೆಯಲ್ಲಿ ಅರಮನೆ ಮಂಡಳಿಯ ಉಪ ನಿರ್ದೇಶಕರಾದ ಸುಬ್ರಹ್ಮಣ್ಯ, ಡಿಡಿಪಿಐ ಜವರೇಗೌಡ, ಆಯುಷ್ ಅಧಿಕಾರಿ ರೇಣುಕಾ ದೇವಿ, ಯೋಗ ಒಕ್ಕೂಟದ ಪದಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.