ಮಂಡ್ಯ: ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾರ್ಯದಲ್ಲಿದ್ದ ಮಹಿಳಾ ಕೂಲಿ ಕಾರ್ಮಿಕರು ಶೌಚಕ್ಕೆ ತೆರಳಿದ ದೃಶ್ಯಗಳನ್ನು ಡ್ರೋನ್ ಬಳಸಿ ಸೆರೆ ಹಿಡಿದು ಕಿಡಿಗೇಡಿಗಳು ವಿಕೃತಿ ಮೆರೆದಿದ್ದು ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಮಂದಗೆರೆ ಸಮೀಪ ಈ ನೀಚ ಕೆಲಸ ನಡೆದಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇಂತಹ ವಿಕೃತಿ ಮೆರೆದ ಪುಂಡರು ಕಾರು, ಬೈಕ್ ಗಳಲ್ಲಿ ಪರಾರಿಯಾಗಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನೂರಾರು ನರೇಗಾ ಕೂಲಿ ಕಾರ್ಮಿಕರು, ಮಹಿಳೆಯರು ಪ್ರತಿಭಟನೆ ನಡೆಸಿದರು.
ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇವಿನಹಳ್ಳಿ ಅಮಾನಿಕೆರೆ ಹೂಳೆತ್ತುವ ಕಾರ್ಯ ನಡೆಯುತ್ತಿದೆ, ಸುತ್ತಲಿನ ವಿವಿಧ ಗ್ರಾಮಗಳ 100ಕ್ಕೂ ಅಧಿಕ ಮಹಿಳೆಯರು ಹೊಳೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ.
ಕಾಮಗಾರಿ ವೇಳೆ ಕೆಲವು ಮಹಿಳಾ ಕಾರ್ಮಿಕರು ಶೌಚಕ್ಕೆ ತೆರಳಿದಾಗ ವಿಕೃತ ಮನಸ್ಸಿನ ಕಿಡಿಗೇಡಿಗಳು ಕೆರೆ ಏರಿ ಮೇಲೆ ನಿಂತು ಡ್ರೋನ್ ಕ್ಯಾಮರಾ ಬಳಸಿ ಚಿತ್ರೀಕರಣ ಮಾಡಿದ್ದಾರೆ.
ಡ್ರೋನ್ ಹಾರಾಡುತ್ತಿರುವುದನ್ನು ಕಂಡ ಕೂಲಿ ಕಾರ್ಮಿಕ ಮಹಿಳೆಯರು ಕೂಗಿ ಬರುವಷ್ಟರಲ್ಲಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ,ಇಂತಹ ನೀಚ ಕೆಲಸ ಮಾಡಿದ ಪೋಕರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನ ಒತ್ತಾಯಿಸಿದ್ದಾರೆ.