ಮೈಸೂರು: ಅಂಧ ಪ್ರಯಾಣಿಕರ ಸರಳ ಪ್ರಯಾಣಕ್ಕಾಗಿ ರಾಜ್ಯ ಸಾರಿಗೆ ಇಲಾಖೆ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು ಸಾರಿಗೆ ಬಸ್ ಗಳಿಗೆ ಧ್ವನಿ ಸ್ಪಂದನ ಡಿವೈಸ್ ಅಳವಡಿಕೆ ಯೋಜನೆಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಚಾಲನೆ ನೀಡಿದರು.
ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ನೂತನ ಯೋಜನೆಗೆ ರಾಮಲಿಂಗರೆಡ್ಡಿ ಅವರು ಚಾಲನೆ ಕೊಟ್ಟರು.
ಅಂಧ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾರಿಗೆ ಬಸ್ ಗಳಿಗೆ ಧ್ವನಿ ಸ್ಪಂದನ ಡಿವೈಸ್ ಅಳವಡಿಕೆ ಮಾಡಲಾಗಿದೆ,ಈ ಡಿವೈಸ್ ಧ್ವನಿ ವರ್ಧಕ ಸಾಧನದ ಮೂಲಕ ಹೋಗುವ ರೂಟ್ ಬಗ್ಗೆ ಮಾಹಿತಿ ನೀಡಲಿದೆ.
ಬಸ್ ನಿಂತ ಸ್ಥಳಕ್ಕೆ ಅಂಧರ ಕರೆದೋಯ್ಯುವ ಸಾಧನ ಇದಾಗಿದೆ. ಬಸ್ ನಿಲ್ದಾಣದ 30 ಮೀಟರ್ ಒಳಗೆ ಬಸ್ ಗಳ ಮಾಹಿತಿ ನೀಡಲಿದೆ.ಮೈಸೂರು ನಗರದ 77 ಮಾರ್ಗಗಳ ಸುಮಾರು 200 ಕ್ಕೂ ಹೆಚ್ಚು ಬಸ್ ಗಳಿಗೆ ಈ ಡಿವೈಸ್ ಅಳವಡಿಕೆ ಮಾಡಲಾಗಿದೆ.
ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮಲಿಂಗರೆಡ್ಡಿ ಅವರು, ರೇಡಿಯೋ ಫ್ರೀಕ್ವೆನ್ಸಿಯ ಧ್ವನಿ ವರ್ಧಕದ ಮೂಲಕ ಬಸ್ ಇರುವ ಜಾಗಕ್ಕೆ ಕಂಡುಕೊಳ್ಳುವ ಸಾಧನ ಅಂಧರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ಗಳಲ್ಲಿ ಹೊಸ ತಂತ್ರಜ್ಞಾನ ತಂದಿದ್ದೇವೆ ಎಂದು ತಿಳಿಸಿದರು.
ಬಟನ್ ಒತ್ತಿದರೆ ಆ ಬಸ್ ಎಲ್ಲಿ ಹೋಗುತ್ತದೆ ಎಂಬ ಮಾಹಿತಿ ಸಿಗುತ್ತದೆ, ದೆಹಲಿ ಮತ್ತು ಮುಂಬೈ ನಗರದಲ್ಲಿ ಈ ವ್ಯವಸ್ಥೆಯಿದೆ ಈಗ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಈ ವ್ಯವಸ್ಥೆಯನ್ನು ಮೈಸೂರಿನಲ್ಲಿ ಮಾಡಿದ್ದೇವೆ, 200 ಬಸ್ ಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸೆಪ್ಟೆಂಬರ್ ಬಳಿಕ ಕ್ರಾಂತಿ ಆಗಲಿದೆ ಎಂಬುದಾಗಿ ಕೆಲವರು ಹೇಳುತ್ತಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ,ಪ್ರತಿಕ್ರಿಯಿಸಿದ ರಾಮಲಿಂಗರೆಡ್ಡಿ, ಯಾವ ಕ್ರಾಂತಿಯೂ ಇಲ್ಲ ಎಲ್ಲದಕ್ಕೂ ಸಿಎಂ ಸಿದ್ದರಾಮಯ್ಯ ನವರೇ ಫುಲ್ ಸ್ಟಾಪ್ ಹಾಕಿದ್ದಾರೆ ಎಂದು ಉತ್ತರಿಸಿ ದರು.
ಉಪ ಮುಖ್ಯಮಂತ್ರಿ ಕೂಡ ಪಕ್ಷ ಏನು ಹೇಳುತ್ತೆ ಅದನ್ನ ಪಾಲಿಸುತ್ತೇನೆ ಎಂದಿದ್ದಾರೆ. ಇದರ ಬಗ್ಗೆ ನಮ್ಮ ಶಾಸಕರು, ಸಚಿವರು ಪದೆ ಪದೆ ಮಾತನಾಡದಿದ್ದರೆ ಪಕ್ಷಕ್ಕೆ ಒಳ್ಳೆಯದು ಎಂದು ಹೇಳಿದರು.
ಸುರ್ಜೇವಾಲ ಅವರು ಶಾಸಕರ ಅಹವಾಲು ಕೇಳಿದ್ದಾರೆ. ಯಾವ ಮಂತ್ರಿ ಬಗ್ಗೆ ದೂರು ಬಂದಿದೆ ಗೊತ್ತಿಲ್ಲ. ಎಲ್ಲವನ್ನೂ ಪಕ್ಷದ ಹೈಕಮಾಂಡ್ ಸರಿ ಮಾಡುತ್ತದೆ ಎಂದು ರಾಮಲಿಂಗರೆಡ್ಡಿ ತಿಳಿಸಿದರು.

