ಮೈಸೂರು: ಶನಿವಾರ ಬೆಳ್ಳಂಬೆಳ್ಳಿಗೆ ಇಪ್ಪತ್ತಕ್ಕೂ ಹೆಚ್ಚು ಟಾಂಗಾ ಗಾಡಿಗಳು ಶೃಂಗಾರಗೊಂಡು ಸಾಂಪ್ರದಾ ಯಿಕ ಉಡುಗೆ ತೊಟ್ಟು ನವ ವಧುವರರಂತೆ ಕಂಗೊಳಿ ಸುತ್ತಿದ್ದ ಜೋಡಿಗಳನ್ನು ಕೂರಿಸಿಕೊಂಡು ನಗರದ ಜನ ರನ್ನು ಆಕರ್ಶಿಸಿ ಮೋಡಿ ಮಾಡಿದವು.
ಈ ವೇಳೆ ಜೋಡಿಗಳು ಅರಸರ ಇತಿಹಾಸ ಸಾರುವ ಪಾರಂಪರಿಕ ಕಟ್ಟಡಗಳ ಕುರಿತು ಮಾಹಿತಿ ಹಂಚುವು ದರ ಜೊತೆಗೆ ಮೈಸೂರಿನ ಜನರ ಕುತೂಹಲವನ್ನು ತಣಿಸಿದರು.
ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ರಂಗಚಾರ್ಲು ಪುರಭವನದ ಆವರಣದಲ್ಲಿ ಪಾರಂಪರಿಕ ಕಟ್ಟಡ ಮತ್ತು ಇತಿಹಾಸದ ಮಾಹಿತಿ, ಪಾರಂಪರಿಕ ಉಡುಗೆಗಳನ್ನು ಪ್ರಚಲಿತಗೊಳಿಸುವುದು ಹಾಗೂ ನಶಿಸಿ ಹೋಗುತ್ತಿರುವ ಪಾರಂಪರಿಕ ಟಾಂಗಾಗಳ ಉಳಿಸುವಿಕೆ ಉದ್ದೇಶದಿಂದ ಟಾಂಗಾ ಸವಾರಿ
ಆಯೋಜಿಸಲಾಗಿತ್ತು.
ಪಾರಂಪರಿಕ ಉಡುಗೊರೆಯನ್ನುಟ್ಟ ದಂಪತಿಗಳಿಗಾಗಿ ಟಾಂಗಾ ಸವಾರಿಗೆ ಇತ್ತೀಚಿನ ಕನ್ನಡ ಪ್ರಸಿದ್ಧ ಸಿನಿಮಾ ಸು ಫ್ರಂ ಸೋ ಚಿತ್ರದ ನಟರು ಮತ್ತು ನಿರ್ದೇಶಕರಾದ ಪ್ರಕಾಶ್ ತುಮಿನಾಡು ದಂಪತಿ ಟಾಂಗಾ ಸವಾರಿ ಮಾಡುವ ಮೂಲಕ ಚಾಲನೆ ನೀಡಿದರು.
ಪಾರಂಪರಿಕ ಉಡುಗೆಯೊಂದಿಗೆ ಟಾಂಗಾ ಸವಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ವಿವಿಧೆಡೆಯಿಂದ ದಂಪತಿಗಳು ಆಗಮಿಸಿ, ನಮ್ಮ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸಿದರು.
ಮೈಸೂರು ಪೇಟ, ಪಂಚೆ ಮತ್ತು ಶಲ್ಯ ಧರಿಸಿ ಪತಿ ಸಿದ್ಧವಾಗಿದ್ದರೆ ರೇಷ್ಮೆ ಸೀರೆ, ಮಲ್ಲಿಗೆ ಮುಡಿದು ಪತ್ನಿ ತಯಾರಾಗಿದ್ದರು. ಉತ್ತರ ಕರ್ನಾಟಕ, ಕೊಡಗು, ಗೌಡರ ಶೈಲಿಯಲ್ಲಿಯೂ ಸಹ ಪಾಲ್ಗೊಂಡಿದ್ದ ದಂಪತಿಗಳು ತಮ್ಮ ಪರಂಪರೆಯನ್ನು ಬಿಂಬಿಸಿದರು, ಮದುವೆಗೆ ಸಿದ್ಧಗೊಂಡಿರುವಂತೆ ಸುಮಾರು 50 ಜೋಡಿಗಳು ಕಂಗೊಳಿಸುತ್ತಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಕಾಶ್ ತುಮಿನಾಡು ಅವರು, ಮೈಸೂರು ದಸರಾ ಮಹೋತ್ಸವ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿಯಾಗಿದೆ, ಇಂದಿನ ಕಾರ್ಯಕ್ರಮ ನಾಡಿನ ಆಚಾರ ಮತ್ತು ಸಾಂಸ್ಕೃತಿಕ ವಿಚಾರವನ್ನು ಸಾರುವುದರೊಂದಿಗೆ ನಮ್ಮ ಯುವ ಪೀಳಿಗೆಯನ್ನು ಸೆಳೆಯಲಿದೆ ಎಂದು ಹೇಳಿದರು.
ಪ್ರಸ್ತುತ ದೇವಸ್ಥಾನ ಅಥವಾ ಇನ್ನಾವುದೋ ಸಮಾರಂಭದಲ್ಲಿ ಮಾತ್ರ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಸಾಂಪ್ರದಾಯಿಕ ಉಡುಗೆ ತೊಡುಗೆ ಮತ್ತಷ್ಟು ಪ್ರಚಲಿತಗೊಳ್ಳಬೇಕಿದೆ ಎಂದು ತಿಳಿಸಿ, ಸು ಫ್ರಂ ಸೋ ಚಿತ್ರದ ಸಣ್ಣ ಡೈಲಾಗ್ ಹೊಡೆದರು.
ಟಾಂಗಾ ಸವಾರಿಯು ನಗರದ ಪ್ರಮುಖ ರಸ್ತೆಗಳಾದ ದೊಡ್ಡ ಗಡಿಯಾರ, ಅಂಬಾ ವಿಲಾಸ ಅರಮನೆ, ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್ ಡೌನ್ ಕಟ್ಟಡ, ಜಗನ್ಮೋಹನ ಅರಮನೆ, ಮೈಸೂರು ನಗರ ಪಾಲಿಕೆ ರಸ್ತೆ ಮೂಲಕ ಸಾಗಿ, ಮಹಾರಾಜ ಸಂಸ್ಕೃತ ಪಾಠಶಾಲೆ, ಕಾಡಾ ಕಚೇರಿ, ಗನ್ ಹೌಸ್ ವೃತ್ತದ ಮೂಲಕ ಹಾರ್ಡಿಂಜ್ ವೃತ್ತದಿಂದ ಪುರಭವನ ತಲುಪಿತು.
ಉದ್ಘಾಟನಾ ಸಮಾರಂಭದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತರಾದ ದೇವರಾಜು, ಇತಿಹಾಸ ತಜ್ಞರಾದ ಡಾ.ಎನ್.ಎಸ್.ರಂಗರಾಜು, ಡಾ.ಸೆಲ್ವ ಪಿಳ್ಳೆ ಅಯ್ಯಂಗಾರ್, ಉಪ ನಿರ್ದೇಶಕರಾದ ಡಾ.ಸಿ.ಎನ್. ಮಂಜುಳಾ, ತಾರಕೇಶ್, ಅಂಬರೀಶ್ ಮತ್ತಿತರರು ಪಾಲ್ಗೊಂಡಿದ್ದರು.

