ಕನಕದಾಸರು ಯಾವುದೆ ಜಾತಿಗೆ ಸೀಮಿತವಲ್ಲ: ಎಚ್ ವಿ ರಾಜೀವ್

ಮೈಸೂರು: ಕನಕದಾಸರು ಯಾವುದೆ ಜಾತಿಗೆ ಸೀಮಿತವಲ್ಲ, ಕುಲ ಕುಲವೆಂದು ಹೊಡೆದಾಡದಿರಿ ಎನ್ನುವ ಮೂಲಕ ಅಂದೇ ಜಾತಿ ಸಂಘರ್ಷಕ್ಕೆ ವಿರುದ್ಧವಾಗಿ ಸಾಮಾಜಿಕ ಜಾಗೃತಿ ಮೂಡಿಸಿದ್ದರು ಎಂದು ಕೆಪಿಸಿಸಿ ಸದಸ್ಯ ಎಚ್ ವಿ ರಾಜೀವ್ ತಿಳಿಸಿದರು.

ನಗರದ ಕಂಸಾಳೆ ಮಹದೇವಯ್ಯ ವೃತ್ತದಲ್ಲಿ‌
ಶ್ರೀ ಕನಕ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ 538ನೇ ಜಯಂತಿ ಕಾರ್ಯಕ್ರಮ ದಲ್ಲಿ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಿಸಿ ಅವರು ಮಾತನಾಡಿದರು.

ಭಕ್ತಿ ಪರಂಪರೆ ಕಾಲದಲ್ಲಿ ಅವರು ಎದುರಿಸಿದ ಸಂಕಷ್ಟಕ್ಕೆ ಬದಲಾಗಿ ತಮ್ಮ ವೈಚಾರಿಕ, ಪ್ರತಿಭಟನಾ ನೆಲೆಗಟ್ಟಿನಿಂದ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆ ನೀಡಿದರು ಎಂದು ‌ತಿಳಿಸಿದರು.

ಭೂಮಿ ಅಗೆಯುತ್ತಿದ್ದಾಗ ಸಿಕ್ಕ ನಿಧಿಯನ್ನು ತಾನು ಬಳಸದೆ ಬಡವರ ಉದ್ಧಾರಕ್ಕೆ, ದೇವಸ್ಥಾನ ಜೀರ್ಣೋದ್ಧಾರ ಹೀಗೆ ಸಮಾಜಮುಖಿ ಕೆಲಸಕ್ಕೆ ನೀಡಿದರು.

ಕೀರ್ತನೆ, ಕಾವ್ಯದ ಮೂಲಕ ಜನರ ಅಜ್ಞಾನ ಹೋಗಲಾಡಿಸುವ ಕೆಲಸ ಮಾಡಿದರು. ವ್ಯಾಸರಾಯರ ಶಿಷ್ಯನಾಗಿ ಅವರ ಮನಗೆದ್ದ ಹಲವು ಘಟನೆ ಇಂದಿಗೂ ಕಥೆಯಾಗಿ ಜನಪ್ರಿಯವಾಗಿವೆ. ಕನಕದಾಸರ ಜೀವನ ಎಲ್ಲರೂ ಅನುಸರಿಸುವಂತದ್ದು, ಅವರ ಜೀವನ ಓದಿ ತಿಳಿದು ಅದರಂತೆ ನಡೆದುಕೊಳ್ಳಬೇಕು ಎಂದು ರಾಜೀವ್ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ರವಿತೇಜ, ಕೇಬಲ್ ಮಹದೇವ್, ಶಿವನಂಜು,ಟಿಂಬರ್ ನಾಗರಾಜ್, ಕೃಷ್ಣಕುಮಾರ್ (ಕಿಟ್ಟಿ) ಕಂಸಾಳೆ ರವಿ, ನಾಗೇಶ್, ಪುಟ್ಟಸ್ವಾಮಿ, ಮಲ್ಲೇಶ್, ನಾಗರಾಜು, ಎಸ್ ಎನ್ ರಾಜೇಶ್, ಯತೀಶ್,ಗೋಬಿ ಸಂತೋಷ್, ದಿನೇಶ್, ರೈಸ್ ಕುಮಾರ್ ಮತ್ತಿತರರು ಹಾಜರಿದ್ದರು.