ನವದೆಹಲಿ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದನ್ನು ಸರಿದಾರಿಗೆ ತರಲು ಸೂಕ್ತ ಕಾನೂನು ರೂಪು-ರೇಷೆ ರೂಪಿಸಲು ಸಂಬಂಧಪಟ್ಟ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಚಳಿಗಾಲದ ಸಂಸತ್ ಅಧಿವೇಶನದ ಶುಕ್ರವಾರದ ಕಲಾಪದಲ್ಲಿ ಮಾತನಾಡಿದ ಯದುವೀರ್, ಮೈಸೂರಿನಲ್ಲಿ ಎಂಡಿಎಂಎ ವಶ ಹಾಗೂ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದಿರುವುದು, ಪೊಲೀಸ್ ಠಾಣೆ ಮೇಲೆ ದಾಳಿ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು.
ಕಳೆದ ಬಾರಿಯ ಕಲಾಪದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈಗಾಗಲೇ ಹಲವಾರು ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ನನ್ನ ಕ್ಷೇತ್ರದ ಪ್ರಮುಖ ನಗರವಾದ ಮೈಸೂರಿನಲ್ಲಿ ಬೃಹತ್ ಎಂಡಿಎಂಎ ತಯಾರಿಕಾ ಘಟಕವನ್ನು ಪತ್ತೆ ಹಚ್ಚಲಾಗಿತ್ತು. ಇದನ್ನು ಕೂಡ ಪತ್ತೆ ಹಚ್ಚಿದ್ದು ನೆರೆ ರಾಜ್ಯದ ಪೊಲೀಸರು. ನಮ್ಮ ಪರಿಸ್ಥಿತಿ ಹೀಗಿದೆ. ಇಂತಹ ನಿರಂತರ ಘಟನೆಗಳಿಂದ ಸ್ಥಳೀಯ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ಸಂಸದರು ತಿಳಿಸಿದರು.
ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಾರಂಪರಿಕ ಹಾಗೂ ಐತಿಹಾಸಿಕ ನಗರವಾದ ಹಂಪಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ, ಇದರಿಂದ ಸ್ಥಳೀಯ ವ್ಯಾಪಾರ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಯದುವೀರ್ ಹೇಳಿದರು.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವಾಲಯವು ಪ್ರವಾಸೋದ್ಯಮ ಕ್ಷೇತ್ರಕ್ಕಾಗಿ ಹೆಚ್ಚಿನ ಭದ್ರತೆ ಹಾಗೂ ಸೌಲಭ್ಯ ಒದಗಿಸುವ ರೀತಿಯಲ್ಲಿ ನೀತಿ ರೂಪಿಸಬೇಕಾದ ಅಗತ್ಯವಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರವಾಸೋದ್ಯಮ ತಾಣಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲು ಸಹ ಕ್ರಮ ಕೈಗೊಳ್ಳಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ಭರವಸೆ ಇದೆ ಎಂದು ಯದುವೀರ್ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದರು.

