ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ ಕುರಿತು ವಿಷಯವನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸಂಸದ ಯದುವೀರ್ ಒಡೆಯರ್ ಯಶಸ್ವಿಯಾಗಿದ್ದು, ತಂಬಾಕು ಮಾರಾಟಕ್ಕೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದ ಯದುವೀರ್, ಸಂಬಂಧಪಟ್ಟ ಸಚಿವರನ್ನು, ಹಿರಿಯ ಅಧಿಕಾರಿಗಳನ್ನು, ತಂಬಾಕು ಮಂಡಳಿಯ ಅಧಿಕಾರಿಗಳನ್ನು ಭೇಟಿ ಮಾಡಿ, ತಂಬಾಕು ಬೆಳೆಗಾರರಿಗೆ ಅನುಕೂಲವಾಗುವ ತೀರ್ಮಾನ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿತ್ತು, ಅದಕ್ಕೆ ಈಗ ಸೂಕ್ತ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ನೋಂದಾಯಿತ ಬೆಳೆಗಾರರ ಹೆಚ್ಚುವರಿ ಎಫ್ ಸಿ ವಿ ತಂಬಾಕು ಬೆಳೆಯನ್ನು ತಂಬಾಕು ಮಂಡಳಿಯು ಅಧಿಕೃತಗೊಳಿಸಿದ ಹರಾಜು ವೇದಿಕೆಗಳಲ್ಲಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಫ್ಲೂ ಕ್ಯೂರ್ಡ್ ವರ್ಜೀನಿಯಾ ತಂಬಾಕನ್ನು ತಂಬಾಕು ಮಂಡಳಿಯ ಅಧಿಕೃತ ಹರಾಜು ವೇದಿಕೆಗಳಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ 1975 ರ ತಂಬಾಕು ಮಂಡಳಿ ಕಾಯ್ದೆ ಅಡಿಯಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಎಂದು ಯದುವೀರ್ ಹೇಳಿದ್ದಾರೆ
2025-26 ಋತುವಿನಲ್ಲಿ ಉತ್ಪಾದಿಸಿದ ಎಫ್‌ಸಿವಿ ತಂಬಾಕಿಗೆ ಪ್ರತಿ ನೋಂದಾಯಿತ ಬೆಳೆಗಾರರು ಪ್ರತಿ ಕಿಲೋಗ್ರಾಂಗೆ ಒಂದು ರೂಪಾಯಿ ಮತ್ತು ಮಾರಾಟದ ಆದಾಯದಲ್ಲಿ ಶೇ. 5ರಷ್ಟು ಮೊತ್ತವನ್ನು ತಂಬಾಕು ನಿಧಿಗೆ ಕೊಡುಗೆ ನೀಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಎಂದು ಸಂಸದರು ವಿವರಿಸಿದ್ದಾರೆ.

