ಹುಣಸೂರು: ಹಾಡಹಗಲೇ ಬಂದೂಕು ಹಿಡಿದ ಮುಸುಕುಧಾರಿಗಳು ಹುಣಸೂರಿನಲ್ಲಿ ಚಿನ್ನದ ಅಂಗಡಿ ಲೂಟಿ ಮಾಡಿದ್ದು ಇಡೀ ಹುಣಸೂರು ಜನತೆ ಬೆಚ್ಚಿ ಬಿದ್ದಿದ್ದು,ತೀವ್ರ ಆತಂಕ್ಕೆ ಒಳಗಾಗಿದ್ದಾರೆ.
ಹುಣಸೂರಿನ ಹೊಸ ಬಸ್ ನಿಲ್ದಾಣದ ಕೂಗಳತೆ ದೂರದಲ್ಲಿರುವ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಜುವೆಲರಿ ಶಾಪ್ ನಲ್ಲಿ ಭಾನುವಾರ ಮಧ್ಯಾಹ್ನ ದರೋಡೆ ನಡೆದಿದೆ.
4 ರಿಂದ 5 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ದರೋಡೆಕೋರರು ದೋಚಿದ್ದಾರೆ.
ಬೈಕ್ ಗಳಲ್ಲಿ ಬಂದ ಐದು ಮಂದಿ ಮುಸುಕುಧಾರಿ ದರೋಡೆಕೋರರು ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಜುವೆಲರಿ ಶಾಪ್ ಗೆ ನುಗ್ಗಿದ್ದಾರೆ.
ಈ ವೇಳೆ ಅಂಗಡಿಯೊಳಗೆ ನುಗ್ಗಿದ ದರೋಡೆಕೋರರು ಗುಂಡಿನ ದಾಳಿ ಮಾಡಿ ಗನ್ ಪಾಯಿಂಟ್ ನಲ್ಲಿ ಅಂಗಡಿಯಲ್ಲಿದ್ದವರನ್ನು ಬೆದರಿಸಿ ಕೋಟಿ,ಕೋಟಿ ಆಭರಣ ಲೂಟಿ ಮಾಡಿ ತಾವು ಬಂದ ಬೈಕ್ ಗಳಲ್ಲೇ ಪರಾರಿಯಾಗಿದ್ದಾರೆ.ಆದರೆ ಒಬ್ಬ ಹೆಲ್ಮೆಟ್ ಅಂಗಡಿಯಲ್ಲೇ ಬಿಟ್ಟು ಹೋಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ವಿಷ್ಣುವರ್ಧನ್,ಹುಣಸೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್, ಡಿ ವೈ ಎಸ್ ಪಿ ರವಿ,ಅಡಿಷನಲ್ ಎಸ್ ಪಿ ನಾಗೇಶ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಹುಣಸೂರು ಪೊಲೀಸರು ಡಾಗ್ ಸ್ಕ್ವಾಡ್ ನೊಂದಿಗೆ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಜುವೆಲರಿ ಶಾಪ್ ಮತ್ತು ಸುತ್ತಮುತ್ತ ತಪಾಸಣೆ ನಡೆಸಿದರು.ಜತೆಗೆ ಅಂಗಡಿ ಸುತ್ತ ಬಾರೀ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.

