ನಂಜನಗೂಡು ತಾಲೂಕು ಆಡಳಿತದ ವೈಖರಿಗೆ ಜನತೆ ಆಕ್ರೋಶ

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಆಡಳಿತದ ವೈಖರಿಗೆ ಜನತೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಅಪರಾಧ‌ ಚಟುವಟಿಕೆಗಳು ಜನರನ್ನ ಬೆಚ್ಚಿಬೀಳಿಸುತ್ತಿದ್ದರೆ ಮತ್ತೊಂದೆಡೆ ಸ್ವಚ್ಛತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಕೊಲೆ,ಸುಲಿಗೆ,ಕಳ್ಳತನಗಳ ಪ್ರಕರಣಗಳಿಂದ ಬೇಸತ್ತಿರುವ ಜನರಿಗೆ ಸ್ವಚ್ಛತೆ ಇಲ್ಲದೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಂಜನಗೂಡಿಗೆ ಬರುವ ಭಕ್ತರನ್ನ ಮೊದಲು ಸ್ವಾಗತಿಸುವುದೇ ಗೊಬ್ಬುವಾಸನೆ. ರಾಷ್ಟ್ರಪತಿ ರಸ್ತೆಯ ರೈಲ್ವೆ ಗೇಟ್ ಬಳಿ ಜನ ಸಾಗಬೇಕಾದರೆ ಮೂಗು ಮುಚ್ಚಲೇ ಬೇಕು. ಇಲ್ಲದಿದ್ದಲ್ಲಿ ವಾಕರಿಕೆ ಬಂದು ಬೀಳುವುದು ಗ್ಯಾರಂಟಿ.

ಸುಭಾಷ್ ಪಾರ್ಕಿನ ಮಟನ್ ತ್ಯಾಜ್ಯ ಈ ಜಾಗಕ್ಕೆ ಬಂದು ಸೇರುತ್ತಿದೆ. ಇನ್ನು ಪಟ್ಟಣದ ಹೊರಭಾಗದ ಹುಲ್ಲಹಳ್ಳಿ ನಾಲೆಯ ಸ್ಥಿತಿ ಕೇಳುವಂತೆಯೇ ಇಲ್ಲ.

ಮಟನ್ ಮಾರ್ಕೆಟ್ ತ್ಯಾಜ್ಯ ಇಲ್ಲಿ ಸಂಗ್ರಹವಾಗುತ್ತಿದೆ. ರೈಲ್ವೆ ಗೇಟ್ ಹಾಕಿದರೆ ವಾಹನ ಸವಾರರು ಗೊಬ್ಬು ವಾಸನೆಯಿಂದ ಪರದಾಡುವಂತಾಗಿದೆ.

ಸಮೀಪದಲ್ಲೇ ಕಾಲೇಜು ಇದೆ. ಶಿಕ್ಷಕರ ಭವನವಿದೆ, ಶನಿದೇವರ ದೇವಾಲಯವಿದೆ. ಜನನಿಬಿಡ ಪ್ರದೇಶವೂ ಇದಾಗಿದೆ. ಆದರಿಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ.

ನಂಜನಗೂಡಿನ ಅಭಿವೃದ್ದಿಯ ಕನಸು ಕಾಣುತ್ತಿರುವ ಶಾಸಕ ದರ್ಶನ್ ಧೃವನಾರಾಯಣ್ ಕಣ್ಣಿಗೆ ಇದು ಕಾಣಿಸದಿರುವುದು ದುರಂತ.

ಈಗಾಗಲೇ ಸ್ಥಳೀಯರು ತಾಲೂಕು ಆಡಳಿತದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.

ಗೊಬ್ಬೆದ್ದು ನಾರುತ್ತಿರುವ ನಂಜನಗೂಡಿನಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡದಿದ್ದಲ್ಲಿ ರೋಗರುಜಿನಗಳ ಗೂಡಾಗು ವುದರಲ್ಲಿ ಸಂಶಯವಿಲ್ಲ.

ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ದಂಡ ತೆರಬೇಕಾಗುತ್ತದೆ.