ಆಸ್ಪತ್ರೆ ಪಕ್ಕದಲ್ಲೇ ಕಸದ ರಾಶಿ! ರೋಗದ ಭೀತಿಯಲ್ಲಿ ಜನತೆ

ಮೈಸೂರು: ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಅಕ್ಕಮ್ಮಣ್ಣಿ ಆಸ್ಪತ್ರೆ ಪಕ್ಕದಲ್ಲೇ ಕಸದ ರಾಶಿ ರಾರಾಜಿಸುತ್ತಿದ್ದು,ಹಸುಗಳಿಗೆ ಇದೇ ಆಹಾರವಾಗಿಬಿಟ್ಟಿದೆ.

ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಕಸದ ರಾಶಿ ಅರ್ಧ ರಸ್ತೆಯನ್ನು ಆವರಿಸಿದ್ದು ಇಲ್ಲಿಂದಲೇ ರೋಗರುಜಿನ ಹರಡುವ ತಾಣವಾಗಿದೆ.ಇನ್ನು ಆಸ್ಪತ್ರೆಗೆ‌ ಬರುವ ರೋಗಿಗಳ ಪಾಡು ಕೇಳುವಂತಲ್ಲ.

ಪ್ರತಿದಿನವೂ ಇದೇ ಕಥೆ.ಇಲ್ಲಿನ ವಾತಾವಣ ಗಬ್ಬೆದ್ದು ಹೋಗಿದೆ.ಹಾಗಾಗಿ ಈ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ.

ಸ್ವಚ್ಛತೆಯಲ್ಲಿ ಮೈಸೂರು ನಗರ ಟಾಪ್ ಸಂಖ್ಯೆಗಳಲ್ಲಿ ಗುರುತಿಸಿಕೊಂಡಿದೆ.ಆದರೆ ಇಲ್ಲಿನ ಸ್ಥಿತಿ ನೋಡಿದರೆ ಮೇಲೆ ತಳುಕು ಒಳಗೆ ಹುಳುಕು ಎಂಬಂತಿದೆ.

ಮನೆ ಮುಂದೆ ಕಸ ಸಂಗ್ರಹಿಸುವ ವಾಹನ ಬಂದರೂ ಮನೆಗಳವರು ಬಳಸಿಕೊಳ್ಳದೆ ಕಸವನ್ನು ರಸ್ತೆಗೆ ತಂದು ಸುರಿಯುತ್ತಿದ್ದಾರೆ.ಈ ಜನರಿಗೆ ಅದು ಯಾವಾಗ ಬುದ್ದಿ ಬಂದೀತೊ ತಿಳಿಯದು.

ಈ ಭಾಗದಲ್ಲಿ ಕಸ ಹಾಕಿದವರ ಫೋಟೋ ತೆಗೆದು ಪೊಲೀಸ್ ಇಲಾಖೆ ಅಥವಾ ನಗರ ಪಾಲಿಕೆಗಾಗಲಿ ಮಾಹಿತಿ ನೀಡಿದರೆ ದಂಡ ಹಾಕುವುದಾಗಿ ಎಚ್ಚರಿಕೆ ಫಲಕ ಸಹ ಅಳವಡಿಸಲಾಗಿದೆ.

ಆದರೂ ಇದಕ್ಕೂ ಕ್ಯಾರೆ ಎನ್ನದ ಜನ ಕಸವನ್ನ ರಸ್ತೆಗೇ ಸುರಿಯಬೇಕೆಂದು ನಿರ್ಧಾರ ಮಾಡಿದಂತಿದೆ.ಪಕ್ಕದಲ್ಲೇ ಅಕ್ಕಮ್ಮಣ್ಣಿ ಆಸ್ಪತ್ರೆ ಇದೆ ಎಂಬ ಪರಿಜ್ಞಾನ ಕೂಡಾ ಈ ಜನರಿಗೆ ಇಲ್ಲ.

ಆಸ್ಪತ್ರೆ ಹೊಂದಿಕೊಂಡೇ ಕಸ‌ ರಾಡಿಯಾಗಿ ಬಿದ್ದಿದ್ದರೂ ಇಲ್ಲಿನ ಸಿಬ್ಬಂದಿ ಕೂಡಾ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ದುರ್ದೈವದ ಸಂಗತಿ.

ಈ ರಸ್ತೆಗೆ ಸಿಸಿ ಕ್ಯಾಮರ ಅಳವಡಿಸಲಾಗಿದೆ.ಹಾಗಿದ್ದರೂ ಯಾರೂ ಕ್ಯಾರೇ ಅನ್ನುತ್ತಿಲ್ಲ.ಇದುವರೆಗೆ ಯಾರಿಗೂ ದಂಡ ವಿಧಿಸಿಲ್ಲ.

ರಸ್ತೆಗೆ ಹೊಂದಿಕೊಂಡಂತೆ ಉದ್ಯಾನವನ ಇದೆ.ಪ್ರತಿದಿನ ಬೆಳಿಗ್ಗೆ ಸಂಜೆ ನೂರಾರು ಮಂದಿ ವಾಕಿಂಗ್ ಮಾಡುತ್ತಾರೆ.

ಉದ್ಯಾನವನದಲ್ಲಿ ಹೂವಿನ ಗಿಡಗಳನ್ನ ಬೆಳೆಸಿ ಅಂದ ಹೆಚ್ಚಿಸುವತ್ತ ಸಹ ಗಮನ ಕೊಡುವ ಪಾಲಿಕೆಯವರಿಗೆ‌ ಕಸದ ರಾಶಿ ಕಾಣುತ್ತಿಲ್ಲವೆ.

ಸ್ಥಳೀಯರಿಗೆ ಕಸದ ರಾಶಿಯಿಂದ ಆತಂಕ ಎದುರಾಗಿದೆ.ಆರೋಗ್ಯ ಸಮಸ್ಯೆ ಕಾಡುತ್ತಿದೆ.
ಜನಪ್ರತಿನಿಧಿಗಳನ್ನ ಕೇಳೋಣವೆಂದರೆ ಚುನಾವಣೆಯೂ ಆಗಲಿಲ್ಲ, ಜನಪ್ರತಿನಿಧಿಗಳೂ ಇಲ್ಲ.

ಈಗಲಾದರೂ ಈ ರಸ್ತೆಯನ್ನ ಕಸ ಮುಕ್ತವಾಗಿಸಲು ಪಾಲಿಕೆ ಅಧಿಕಾರಿಗಳು
ಮುಂದಾಗುವರೆ‌ ಕಾದು ನೋಡಬೇಕಿದೆ.