ಮೈಸೂರು: ಚಾಮುಂಡಿ ಬೆಟ್ಟಕ್ಕೆ ಡಿ. 31ರ ರಾತ್ರಿ 7 ಗಂಟೆಯಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿ ಮೈಸೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಟ್ಕರ್ ಅವರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೊಸ ವರ್ಷಚರಣೆಗೆ 4 ಡಿಸಿಪಿ, 7ಎಸಿಪಿ, 29 ಇನ್ಸ್ಪೆಕ್ಟರ್ , 55 ಸಬ್ ಇನ್ಸ್ಪೆಕ್ಟರ್,103 ಎಎಸ್ಐ,761 ಪುರುಷ ಪೊಲೀಸ್, 154 ಮಹಿಳಾ ಪೊಲೀಸರು ಸೇರಿದಂತೆ ಒಟ್ಟು 1113 ಪೊಲೀಸರ ನಿಯೋಜನೆ ಮಾಡಲಾಗಿದೆ.
ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಹೆಚ್ಚಿನ ಸಿಸಿ ಕ್ಯಾಮರಾ ಆಳವಡಿಸಲಾಗುತ್ತಿದೆ, ನಗರ ವ್ಯಾಪ್ತಿಯಲ್ಲಿ ಡಿಜೆ ಬಳಸವುದಕ್ಕೆ ನಿರ್ಬಂಧ ಹೇರಲಾಗಿದೆ ಡಿ. 31 ರಾತ್ರಿಯಿಂದ ಬೆಳಗ್ಗೆ ವರೆಗೂ ಚಾಮುಂಡಿ ಪಡೆ, 112 ಸೇರಿದಂತೆ ನಗರದ ಎಲ್ಲಾ ಕಡೆ ಪೊಲೀಸರ ಗಸ್ತು ಹಾಕಲಾಗಿಧು, ನಗರ ಹೊರ ಭಾಗದಲ್ಲಿ ಎಲ್ಲಾ ಕಡೆ ಚೆಕ್ ಪೊಸ್ಟ್ ನಿರ್ಮಾಣ ಮಾಡಲಾಗಿದೆ.
ಸಾರ್ವಜನಿಕರಿಗೆ ಶುಭ ಕೋರುವ ನೆಪದಲ್ಲಿ ಕೀಟಲೆ/ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ನಗರದಲ್ಲಿ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಠಾಣಾವಾರು ವಿಶೇಷ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ.
ಈ ಕಾರ್ಯಪಡೆಗಳು ಕಾರ್ಯನಿರತವಾಗಿದ್ದು ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮಹಿಳೆಯರ ರಕ್ಷಣೆಯ ಹಿತದೃಷ್ಟಿಯಿಂದ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ಸುರಕ್ಷತಾ ಪಿಂಕ್ ಗರುಡಾ ಚಾಮುಂಡಿ ಪಡೆಪಡೆಗಳು ಗಸ್ತಿನಲ್ಲಿರುತ್ತದೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶ್ವಾನದಳ ಮತ್ತು ವಿಧ್ವಂಸಕ ಕೃತ್ಯ ತಡೆ ತಂಡದಿಂದ ತಪಾಸಣೆ ನಡೆಸಲಾಗುವುದು.
ಹೊಸವರ್ಷಾಚರಣೆ ನೆಪದಲ್ಲಿ ವಾಹನಗಳನ್ನು ವೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದನ್ನು ಹಾಗೂ ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಸಂಚಾರ ಪೊಲೀಸರು ಒಳಗೊಂಡ ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಲಾಗಿದೆ.
ಬಲೂನ್ ಗಳಿಗೆ ಅನಧಿಕೃತ ಸಿಲಿಂಡರ್‌ಗಳ ಮೂಲಕ ಯಾವುದೇ ರೀತಿಯ ಅನಿಲ ತುಂಬಿ ಮಾರಾಟ ಮಾಡುವುದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಡಿ.ಜೆ. ಬಳಸುವುದನ್ನು ನಿಷೇಧಿಸಲಾಗಿದ್ದು, ಈ ಬಗ್ಗೆ ಶಬ್ದ ಮಾಲಿನ್ಯ ಪರಿಶೀಲನಾ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದ್ದು, ಡಿ.ಜೆ. ಬಳಸುವುದು ಕಂಡು ಬಂದರೆ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ಯಾವುದೇ ರೀತಿಯ ತೊಂದರೆಯಾದಲ್ಲಿ ಪೊಲೀಸ್ ಕಂಟ್ರೋಲ್ ರೂಂ. ದೂರವಾಣಿ ಸಂಖ್ಯೆ: 0821-2418339 ಅಥವಾ 0821-2418139 ಅಥವಾ 112 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.
31-12-2025 ರ ರಾತ್ರಿ ಆರಂಭವಾಗುವ ಹೊಸ ವರ್ಷಾಚರಣೆಯನ್ನು ಆಚರಿಸುವ ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಹೋಂ ಸ್ಟೇ, ಸರ್ವಿಸ್ ಅಪಾರ್ಟ್‌ಮೆಂಟ್, ಅಪಾರ್ಟ್‌ಮೆಂಟ್ ಅಸೋಸಿಯೇಷನ್, ಮಾಲ್ಸ್ ಮತ್ತು ಸಂಘಸಂಸ್ಥೆಗಳು ಪೊಲೀಸ್ ಆಯುಕ್ತರ ಕಛೇರಿಯಿಂದ ಅನುಮತಿ ಪಡೆದು ಮಧ್ಯರಾತ್ರಿ 01-00 ಗಂಟೆಯೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕೆಂದು ಆಯುಕ್ತರು ಆದೇಶಿಸಿದ್ದಾರೆ.

