ಕೊಳ್ಳೇಗಾಲ: ಪ್ರಸಿದ್ಧ ಧಾರ್ಮಿಕ ತಾಣ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಮುಂಜಾನೆ ಆಕಸ್ಮಿಕ ಅಗ್ನಿ ಅನಾಹುತ ಸಂಭವಿಸಿ ಹತ್ತಾರು ಅಂಗಡಿ ಮಳಿಗೆಗಳು ಹೊತ್ತಿ ಉರಿದು ಸುಟ್ಟುಹೋಗಿವೆ.
ಬಿಳಿಗಿರಿರಂಗನ ಬೆಟ್ಟದ ಬಸ್ ನಿಲ್ದಾಣ ಸಮೀಪ ಸರ್ಕಲ್ ನಲ್ಲಿ ಅಂಗಡಿ, ಮುಂಗಟ್ಟುಗಳು, ಜ್ಯೂಸ್ ಸೆಂಟರ್, ಟೀ ಅಂಗಡಿ, ಬಜ್ಜಿ ಬೋಂಡ ಅಂಗಡಿ, ಹೀಗೆ ಹತ್ತಾರು ವ್ಯಾಪಾರ ಮಳಿಗೆಗಳಿವೆ.
ಸಮೀಪದಲ್ಲೇ ಪಶುಸಂಗೋಪನ ಇಲಾಖೆಯ ಕಚೇರಿ ಹಾಗೂ ಸ್ವಲ್ಪ ದೂರದಲ್ಲಿ ಬಸ್ ನಿಲ್ದಾಣ ಕೂಡಾ ಇದೆ. ಹಾಗಾಗಿ ವ್ಯಾಪಾರ ವಹಿವಾಟುಗಳು ಈ ಸಂರ್ಕಲ್ ನಲ್ಲಿ ಜೋರಾಗಿ ನಡೆಯುತ್ತದೆ.
ವ್ಯಾಪಾರಸ್ಥರು ಇದೇ ಅಂಗಡಿ ಮಳಿಗೆಗಳಿಂದ ಬದುಕು ಕಟ್ಟಿಕೊಂಡಿದ್ದಾರೆ, ಆದರೆ ಶುಕ್ರವಾರ ಮುಂಜಾನೆ ಸುಮಾರು 3.30ರ ವೇಳೆಗೆ ಬೆಂಕಿ ಅವಘಡ ಸಂಭವಿಸಿದೆ, ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಘಟನೆಯಲ್ಲಿ ಮೀನಾ ನಾಗೇಂದ್ರ,ಡಿ.ರಾಜು, ಸುಮಾ ಶೇಷಾದ್ರಿ, ಎಲ್.ಸ್ವಾಮಿ, ಆರ್.ನಾಗೇಂದ್ರ, ಜಿ.ಕುಮಾರ್, ಎಲ್. ಗೋವಿಂದ ಮೊದಲಾದವರ ಅಂಗಡಿ ಮಳಿಗೆಗಳು ಅಗ್ನಿ ದುರಂತದಲ್ಲಿ ನಾಶವಾಗಿದ್ದು, ಮುಂದೇನು ಎಂಬ ಚಿಂತೆಯಲ್ಲಿ ಕಣ್ಣೀರಿಡುತ್ತಿದ್ದಾರೆ.
ಗುರುವಾರ ರಾತ್ರಿ ಎಂದಿನಂತೆ ವ್ಯಾಪಾರ ಮುಗಿಸಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮನೆಗೆ ತೆರಳಿದ್ದರು.
ಅವರೆಲ್ಲ ಮುಂಜಾನೆಯ ಚಳಿಯಲ್ಲಿ ಬೆಚ್ಚಗೆ ಹೊದ್ದು,ಸಿಹಿ ನಿದ್ದೆಯಲ್ಲಿದ್ದಾಗಲೇ ಅಘಾತ ಸುದ್ದಿ ಅವರ ಕಿವಿಗೆ ಬಂದು ಬಡಿದಿದೆ.
ಬೆಳಗ್ಗೆ 3.30ರ ಸಮಯದಲ್ಲಿ ಕಾಣಿಸಿಕೊಂಡ ಬೆಂಕಿ ಒಮ್ಮೆಲೆ ಹತ್ತಿ ಉರಿಯಲಾರಂಭಿಸಿದೆ. ಇದ್ದಕ್ಕಿದ್ದಂತೆ ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆಯನ್ನು ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದು ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಅಗ್ನಿ ಅನಾಹುತಕ್ಕೆ ಹತ್ತಾರು ಅಂಗಡಿ ಮಳಿಗೆಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂ ನಷ್ಟವಾಗಿದೆ.
ಆ ಹೊತ್ತಿಗೆ ಹೆಚ್ಚಿನ ಜನ ನಿದ್ದೆಯಲ್ಲಿದ್ದುದರಿಂದ ಹೊರಗೆ ಏನಾಗುತ್ತಿದೆ ಎಂಬುದು ಗೊತ್ತಾಗಿಲ್ಲ. ಆದರೂ ಬೆಂಕಿ ಉರಿಯುವುದನ್ನು ನೋಡಿದ ಕೆಲವರು ಕೂಗಿ ಕರೆದು ಬೆಂಕಿ ನಂದಿಸಲು ಮುಂದಾಗಿದ್ದಾರೆ.
ಆದರೆ ಅಷ್ಟರಲ್ಲೇ ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಚಾಚಿದ್ದರಿಂದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಸುಟ್ಟು ಕರಕರಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪುವ ಹೊತ್ತಿಗೆ ಅಂಗಡಿ ಮಳಿಗೆ ಮತ್ತು ಅಲ್ಲಿದ್ದ ಪದಾರ್ಥಗಳು ಸುಟ್ಟು ಭಸ್ಮವಾಗಿದ್ದವು.
ಸ್ಥಳದಲ್ಲಿ ನೀರವ ಮೌನ ಆವರಿಸಿದ್ದು, ತಂಪು ಪಾನೀಯ, ಟೀ ಕಾಫಿ, ಬಜ್ಜಿ ಬೋಂಡಾ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ತಮ್ಮ ಅಂಗಡಿ ಅದರೊಳಗಿದ್ದ ವಸ್ತುಗಳು, ಹಣ ಎಲ್ಲವನ್ನು ಕಳೆದುಕೊಂಡು ದುಖಿತರಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದಂತಾಗಿದೆ.
ವಿಷಯ ತಿಳಿದ ಯಳಂದೂರು ವೃತ ನಿರೀಕ್ಷಕ ಸುಬ್ರಹ್ಮಣ್ಯ ಅವರು ಸಿಬ್ಬಂದಿ ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯಳಂದೂರು ಪೊಲೀಸರು ನೆನ್ನೆ ರಾತ್ರಿಯ ಸಿಸಿ ಕ್ಯಾಮರಾಗಳ ಪುಟೇಜ್ ಪರಿಶೀಲನೆ ಮಾಡಿದ್ದಾರೆ. ತಡ ರಾತ್ರಿ 2 ಗಂಟೆ 7 ನಿಮಿಷದಲ್ಲಿ ಅಂಗಡಿ ಮಳಿಗೆಗಳಲ್ಲಿ ಹೊಗೆ ಕಾಣಿಸಿ ಕೊಂಡಿದ್ದು, 7 ಅಂಗಡಿ ಸಂಪೂರ್ಣ ಸುಟ್ಟುಹೋಗಿವೆ, ಮತ್ತೊಂದು ಅಂಗಡಿ ಅರೆಬರೆ ಬೆಂದುಹೋಗಿರುವ ಕುರುಹುಗಳು ಕಾಣಿಸಿದೆ.
ಈ ಅಗ್ನಿ ಅವಘಡಕ್ಕೆ ವಿಧ್ಯುತ್ ಶಾರ್ಕ್ ಸರ್ಕ್ಯೂಟ್ ಕಾರಣವಾಗಿದ್ದರೂ ಕೆಲವರು ಇದು ಕಿಡಿಗೇಡಿಗಳ ಕೃತ್ಯ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ಇಲ್ಲಿನ ಸಿಸಿಟಿವಿ ಗಳನ್ನ ಪರಿಶೀಲನೆ ಮಾಡಿದಾಗ ಯಾವುದೇ ವೈಕ್ತಿ ಓಡಾಡಿರುವ ದೃಶ್ಯಗಳು ಕಂಡುಬಂದಿಲ್ಲ. ಕಿಡಿಗೇಡಿಗಳ ಕೃತ್ಯ ವ್ಯಸಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಸುಟ್ಟುಹೋದ ಅಂಗಡಿಗಳಲ್ಲಿ ನಿಖರವಾಗಿ ನಷ್ಠ ಗುರುತಿಸ ಬೇಕಾದರೆ ಇದರ ಬಗ್ಗೆ ಹೆಚ್ಚಿನ ಪರಿಶೀಲನೆಯ ಅವಶ್ಯಕತೆ ಇದೆ. ಆದ್ದರಿಂದ ಈ ಬೆಂಕಿ ಅವಘಡದಿಂದ ಸಂಪೂರ್ಣ ಭಸ್ಮವಾಗಿರುವ ಖಾಸಗಿ ಅಂಗಡಿ ಮಾಲೀಕರುಗಳಿಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಪರಿಹಾರ ಕೊಡಿಸುವವರೇ ಎಂಬುದನ್ನು ಕಾದು ನೋಡಬೇಕಿದೆ.

