ಚಾಮರಾಜನಗರ: ಜಿಲ್ಲೆಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ದೇಶನ ನೀಡಿದ್ದು ಸರಕಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜ.3 ರಂದು ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಬಂದ ಇಬ್ಬರು ಕಿತ್ತು ಅದೇ ಬೈಕ್ ನಲ್ಲಿ ಪರಾರಿಯಾಗಿದ್ದರು.
ಭಾರತಿ ಎಂಬ ಮಹಿಳೆ ತಮ್ಮ ಸಂಬಂಧಿಯೊಂದಿಗೆ ಗುಂಡ್ಲುಪೇಟೆ ಪಟ್ಟಣದ ದೇವರಾಜ ಅರಸು ಸ್ಪೇಡಿಯಂಗೆ ವಾಕಿಂಗ್ ಹೋಗಿ ವಾಪಾಸು ಮನೆಗೆ ಹೋಗುವಾಗ ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಎದುರುಗಡೆ ಇರುವ ರಾಮಸ್ವಾಮಿ ಕ್ಲಿನಿಕ್ ಬಳಿ ಜ.3 ರಂದು ಸಾಯಂಕಾಲ ಸುಮಾರು 6.50 ರ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಒಂದು ಕಪ್ಪು ಬಣ್ಣದ ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದು ಆಕೆಯ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಒಂದು ಎಳೆಯ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದರು.
ಭಾರತಿ ಅವರು ನೀಡಿದ ದೂರಿನ ಮೇರೆಗೆ ಗುಂಡ್ಲುಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.
ಘಟನೆ ನಡೆದ ತಕ್ಷಣ ಕಾರ್ಯ ಪ್ರವೃತ್ತರಾದ ಗುಂಡ್ಲುಪೇಟೆ ಪೊಲೀಸರು, ಚಾಮರಾಜನಗರ ಜಿಲ್ಲೆಯ ಪೊಲೀಸ್ ಅಧಿಕ್ಷಕರಾದ ಮುತ್ತುರಾಜ್ ಎಂ. ಅವರ ಮಾರ್ಗದರ್ಶನದಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಎಂ.ಎನ್. ಶಶಿಧರ್ ಅವರ ಮೇಲ್ವಿಚಾರಣೆಯಲ್ಲಿ ಚಾಮರಾಜನಗರ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಸ್ನೇಹರಾಜ್ ಎನ್ ಅವರ ನೇತೃತ್ವದಲ್ಲಿ, ಆರೋಪಿಗಳು ಮತ್ತು ಮಾಲು ಪತ್ತೆ ಬಗ್ಗೆ ಒಂದು ವಿಶೇಷ ತಂಡವನ್ನು ರಚನೆ ಮಾಡಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ವಿಶೇಷ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಆಹೋ ರಾತ್ರಿ ಮಿಂಚಿನ ಕಾರ್ಯಾಚರಣೆ ನಡೆಸಿ ತಮಿಳುನಾಡು ಮೂಲದ ವಾಂಜಿನಾಥನ್ @ ವಾಂಜಿ ಮತ್ತು ಪ್ರಭಾಕರನ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಗುಂಡ್ಲುಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಭಾರತಿ ಅವರ ಕತ್ತಿನಿಂದ ಕಿತ್ತುಕೊಂಡಿದ್ದ 40 ಗ್ರಾಂ ತೂಕದ ಮಾಂಗಲ್ಯ ಚಿನ್ನದ ಸರ, ಕಡಕೋಳ ಕೈಗಾರಿಕಾ ಪ್ರದೇಶದಲ್ಲಿ ಕಳ್ಳತನ ಮಾಡಿದ್ದ ಒಂದು ಪಲ್ಸರ್ ಬೈಕ್, ನಂಜನಗೂಡು ದೇವಸ್ಥಾನದ ಬಳಿ ಒಬ್ಬ ಮಹಿಳೆಯಿಂದ ಕಸಿದುಕೊಂಡಿದ್ದ ಒಂದು ಚಿನ್ನದ ಮಾಂಗಲ್ಯ, ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಸೇರಿದಂತೆ ಸುಮಾರು 8 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಮತ್ತು ಬೈಕ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.
ಆರೋಪಿಗಳು ತಮಿಳುನಾಡಿನ ಹಲವು ಕಡೆಗಳಲ್ಲಿ ಸರಗಳ್ಳತನ, ಮನೆಗಳ್ಳತನ ಬೈಕ್ ಹಾಗೂ ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಸಂತೇಮರಳ್ಳಿ ವೃತ್ತದ ಸಿಪಿ.ಐ. ಸಾಗರ್, ತೆರಕಣಾಂಬಿ ಪೊಲೀಸ್ ಠಾಣೆಯ ಶಿವರಾಜು, ಮೋಹನ್, ಕೃಷ್ಣ, ರಾಜು, ಮಹೇಶ, ನಿಂಗರಾಜು, ನಟೇಶ ಹಾಗೂ ಜೀಪ್ ಚಾಲಕರಾದ ಮಹದೇವಸ್ವಾಮಿ, ಸಂತೋಷ್, ಜಯಕುಮಾರ್, ಮಹದೇವ್ ಮತ್ತು ಸಿ.ಡಿ.ಆರ್. ವಿಭಾಗದ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ತಂಡದ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ಎಂ.ಮುತ್ತುರಾಜು ಅವರು ಶ್ಲಾಘಿಸಿದ್ದಾರೆ.

