ಸಾಂಸ್ಕೃತಿಕ ನಗರಿಯಲ್ಲಿನ ಕುವೆಂಪು ನಿವಾಸ ಮ್ಯೂಸಿಯಂ-ಬೈರತಿ ಸುರೇಶ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಷ್ಟ್ರಕವಿ ಕುವೆಂಪು ಅವರು ವಾಸವಿದ್ದ ನಿವಾಸವನ್ನು ಸ್ಮಾರಕ ಮತ್ತು ಮ್ಯೂಸಿಯಂ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ಅವರು ಗಮನ ಸೆಳೆಯುವ ಸೂಚನೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಸರ್ಕಾರದ ಪರವಾಗಿ ಉತ್ತರಿಸಿದ ನಗರ ಅಭಿವೃದ್ದಿ ಸಚಿವ ಭೈರತಿ ಸುರೇಶ್, ಮೈಸೂರಿನಲ್ಲಿ ರಾಷ್ಟ್ರಕವಿ ಕುವೆಂಪು ಅವರು ಹಲವಾರು ವರ್ಷಗಳ ಕಾಲ ವಾಸ ಮಾಡಿದ್ದರು. ಇಲ್ಲಿಯೇ ಅನೇಕ ಕೃತಿಗಳನ್ನು ಸಹ ರಚಿಸಿದ್ದರು. ಅವರು ಇದ್ದ ನಿವಾಸವನ್ನು ಸ್ಮಾರಕ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಸ್ಮಾರಕ ನಿರ್ಮಾಣ ಹಾಗೂ ಮ್ಯೂಸಿಯಂ ಮಾಡಲು ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ನೀಡಲಿದೆ,
ಕುವೆಂಪು ಅವರು ವಾಸ ಮಾಡಿದ್ದ ನಿವಾಸವನ್ನು ಯಾವ ರೀತಿ ಪುನರ್ನವೀಕರಣ ಮಾಡಬೇಕು ಎಂಬುದರ ಕುರಿತು ಸದ್ಯದಲ್ಲೇ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಮುಂದಿನ ಪೀಳಿಗೆಗೆ ಅವರ ವಿಚಾರಧಾರೆಗಳು ತಿಳಿಯಬೇಕಾದ ಅಗತ್ಯವಿರುವುದರಿಂದ ಸರ್ಕಾರ ಎಲ್ಲಾ ನೆರವು ನೀಡಲು ಬದ್ಧವಿದೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಶಾಸಕ ಹರೀಶ್ ಗೌಡ ಅವರು, ರಾಷ್ಟ್ರಕವಿ ಕುವೆಂಪು ಅವರು ಅನೇಕ ವರ್ಷಗಳ ಕಾಲ ಮೈಸೂರಿನಲ್ಲಿ ವಾಸ ಮಾಡಿದ್ದರು‌ ಅವರ ವಿದ್ಯಾಭ್ಯಾಸವು ಇಲ್ಲಿಯೇ ನಡೆದಿತ್ತು. ಅನೇಕ ಕಾವ್ಯಗಳು, ಕಾದಂಬರಿಗಳನ್ನು ಇಲ್ಲಿಯೇ ರಚಿಸಿ, ತಮ್ಮ ಜೀವನದ ಕೊನೆಯ ದಿನಗಳನ್ನು ಇಲ್ಲಿಯೇ ಕಳೆದಿದ್ದರು. ಹೀಗಾಗಿ ಅವರ ಮನೆಯನ್ನು ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಿಸಲು ಸರ್ಕಾರ ತ್ವರಿತ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.