ಫೆ.14 ಬೃಹತ್ ‘ಸಾಮೂಹಿಕ ಹನುಮಾನ್ ಚಾಲೀಸಾ’ ಪಾರಾಯಣ: ಭಕ್ತರಿಗೆ ಭಾಗವಹಿಸಲು ಗಣಪತಿ ಶ್ರೀಗಳ ಕರೆ

ಮೈಸೂರು, ಫೆ. 10- ಮೈಸೂರಿನ ಮಹಾರಾಜ ಕಾಲೇಜು ‌ ಮೈದಾನದಲ್ಲಿ ಇದೇ ಫೆಬ್ರವರಿ 14ರಂದು ‘ಸಾಮೂಹಿಕ ಹನುಮಾನ್ ಚಾಲೀಸಾ’ ಪಾರಾಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವಧೂತ ದತ್ತ ಪೀಠದ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀಗಳು ಹನುಮಾನ್ ಚಾಲೀಸಾ ಪಾರಾಯಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಕಾರ್ಯಕ್ರಮದ ವಿಶೇಷ: ಫೆಬ್ರವರಿ 14ರಂದು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯ ಕ್ರಮದಲ್ಲಿ ಸಾವಿರಾರು ಭಕ್ತರು ಒಗ್ಗೂಡಿ ಹನುಮಾನ್ ಚಾಲೀಸಾ ಪಾರಾಯಣ ಮಾಡಲಿದ್ದಾರೆ. ತುಳಸೀದಾಸರು ರಚಿಸಿರುವ ಹನುಮಾನ್ ಚಾಲೀಸಾ ಅತ್ಯಂತ ಪವಿತ್ರವಾದದ್ದು ಹಾಗೂ ಸುಂದರಕಾಂಡ ಮತ್ತು ಸಂಪೂರ್ಣ ರಾಮಾಯಣದ ಸಾರವನ್ನು ಒಳಗೊಂಡಿದೆ ಎಂದು ಶ್ರೀಗಳು ತಿಳಿಸಿದರು.

ಈ ಹಿಂದೆ ತೆನಾಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷದಷ್ಟು ಭಕ್ತರು ಪಾಲ್ಗೊಂಡು ವಿಶ್ವ ದಾಖಲೆ ನಿರ್ಮಿಸಿದ್ದರು ಎಂದು ಅವರು ಸ್ಮರಿಸಿದರು.

ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ: “ಹನುಮಾನ್ ಚಾಲೀಸಾ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ಹಾಡಬಹುದಾದ ಸುಲಭ ಹಾಗೂ ಶಕ್ತಿಶಾಲಿ ಸ್ತೋತ್ರ. ಹನುಮಂತನು ರಕ್ಷಕನಾಗಿದ್ದು, ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುತ್ತಾನೆ. ಲೋಕ ಕಲ್ಯಾಣಕ್ಕಾಗಿ ಮತ್ತು ಜಗತ್ತಿನ ಒಳಿತಿಗಾಗಿ ಈ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸಲಾಗಿದೆ,” ಎಂದು ಶ್ರೀಗಳು ತಿಳಿಸಿದರು.

ಶಿವರಾತ್ರಿಯ ಮಹತ್ವ: ಮರುದಿನವೇ ಶಿವರಾತ್ರಿ ಹಬ್ಬವಿರುವುದು ಈ ಕಾರ್ಯಕ್ರಮದ ವಿಶೇಷತೆಯನ್ನು ಹೆಚ್ಚಿಸಿದೆ. ಹನುಮಂತನು ಶಿವನ ಅಂಶ ಹಾಗೂ ರಾಮನ ಪ್ರಿಯ ಭಕ್ತನಾಗಿದ್ದು, ಈ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಮಾಡುವುದು ಅತ್ಯಂತ ಫಲಪ್ರದ ಎಂದು ಶ್ರೀಗಳು ವಿವರಿಸಿದರು.

ಶಿವರಾತ್ರಿ ಪ್ರಯುಕ್ತ ಫೆಬ್ರವರಿ 14ರ ಸಂಜೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಪ್ರತಿಯೊಬ್ಬ ಭಕ್ತರಿಗೂ ರುದ್ರಾಕ್ಷಿಯನ್ನು ನೀಡಲಾಗುವುದು ಎಂದು ಶ್ರೀಗಳು ತಿಳಿಸಿದರು

ಸಾಮೂಹಿಕ ಪ್ರಾರ್ಥನೆಯ ಶಕ್ತಿ: ಒಬ್ಬರೇ ಪ್ರಾರ್ಥಿಸುವುದಕ್ಕಿಂತ ಸಾಮೂಹಿಕವಾಗಿ ಪ್ರಾರ್ಥಿಸುವುದರಲ್ಲಿ ಅಪಾರ ಶಕ್ತಿಯಿದೆ. ಪುರಾಣಗಳ ಪ್ರಕಾರ, ರಾಮಾವತಾರಕ್ಕೆ ಮುನ್ನ 33 ಕೋಟಿ ದೇವತೆಗಳು ಒಗ್ಗೂಡಿ ಪ್ರಾರ್ಥಿಸಿದಾಗ ಭಗವಂತನು ಪ್ರತ್ಯಕ್ಷನಾಗಿ ರಾವಣ ಸಂಹಾರದ ಭರವಸೆ ನೀಡಿದ್ದನು. ಅದೇ ರೀತಿ, ಲಕ್ಷಾಂತರ ಜನರು ಒಟ್ಟಾಗಿ ಸೇರಿ ಹನುಮಾನ್ ಚಾಲೀಸಾ ಪಾರಾಯಣ ಮಾಡಿದಾಗ ಪ್ರತಿಯೊಬ್ಬರಿಗೂ ಆ ಸಂಪೂರ್ಣ ಪಾರಾಯಣದ ಪುಣ್ಯ ಲಭಿಸುತ್ತದೆ ಎಂದು ಶ್ರೀಗಳು ಸಾಮೂಹಿಕ ಪ್ರಾರ್ಥನೆಯ ಮಹತ್ವವನ್ನು ವಿವರಿಸಿದರು.

ಭಕ್ತರಿಗೆ ಆಹ್ವಾನ: ಕರ್ನಾಟಕವು ಹನುಮನ ನಾಡು. ಇಲ್ಲಿನ ಭಕ್ತರೆಲ್ಲರೂ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡು ಹನುಮಂತನ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕರೆ ನೀಡಿದರು.

“ನಿಮ್ಮ ಜೊತೆಯಲ್ಲಿ ನಾನೂ ಇರುತ್ತೇನೆ, ನಾನೂ ಹಾಡುತ್ತೇನೆ. ಹನುಮಂತನ ರಕ್ಷೆ ಎಲ್ಲರಿಗೂ ಸಿಗಲಿ,” ಎಂದು ಆಶೀರ್ವದಿಸಿದರು.

“ಸಾಮೂಹಿಕವಾಗಿ ಎಲ್ಲರೂ ಸೇರಿದಾಗ, ಒಬ್ಬೊಬ್ಬರ ಪ್ರಾರ್ಥನೆಯ ಫಲವೂ ಎಲ್ಲರಿಗೂ ದೊರೆಯುತ್ತದೆ. ಇದುವೇ ಸಾಮೂಹಿಕ ಪ್ರಾರ್ಥನೆಯ ವಿಶೇಷ ಎಂದು ಅವರು ತಿಳಿಸಿದರು.

ಬನ್ನಿ, ಎಲ್ಲರೂ ಸೇರಿ ಹನುಮಾನ್ ಚಾಲೀಸಾ ಪಾರಾಯಣ ಮಾಡೋಣ‌ ಎಂದು ಶ್ರೀಗಳು ನಾಡಿನ ಜನತೆಗೆ ಕರೆ ನೀಡಿದರು.

ಫೆಬ್ರವರಿ 14ರ ದಿನದಂದೇ ಹನುಮಾನ್ ಚಾಲೀಸಾ ಪಾರಾಯಣ ಮಹಾ ಯಜ್ಞಕ್ಕೆ ಏಕೆ ಆದ್ಯತೆ ನೀಡಿದ್ದೇವೆ ಎಂದರೆ ಆ ದಿನ ಸೀತಾರಾಮರು ಒಂದಾದ ದಿನ ಹಾಗಾಗಿ ಆ ದಿನವನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀಗಳು ಈ ಸಂದರ್ಭದಲ್ಲಿ ತಿಳಿಸಿದರು.

ಹನುಮಾನ್ ಚಾಲೀಸಾ ಸಂದರ್ಭದಲ್ಲಿ ಪ್ರತಿಯೊಬ್ಬ ಭಕ್ತರಿಗೂ ಅಂದು ಪ್ರಸಾದ ವಿನಿಯೋಗವನ್ನು ಸಹ ಏರ್ಪಡಿಸಿದ್ದೇವೆ ಎಂದು ಹೇಳಿದರು.

ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞಕ್ಕೆ ನಮ್ಮೊಂದಿಗೆ ಮೈಸೂರಿನ ಹಲವಾರು ಸಂಘ ಸಂಸ್ಥೆಗಳು ಸಹ ಕೈಜೋಡಿಸಿವೆ ಇಂದು ಶ್ರೀಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಡಾದ ಮಾಜಿ ಅಧ್ಯಕ್ಷ ಹೆಚ್‌.ವಿ. ರಾಜೀವ್ ಅವರು ಮಾತನಾಡಿ, ಹನುಮಾನ್ ಚಾಲೀಸಾ ಪಾರಾಯಣ ಮಹಾ ಯಜ್ಞಕ್ಕೆ ಪ್ರತಿಯೊಬ್ಬ ಹನುಮ ಭಕ್ತರು, ಹಿಂದುಗಳು ಆಗಮಿಸಬೇಕು ಎಂದು ಮನವಿ ಮಾಡಿದರು.