ಗ್ರಾಮದೇವತೆ ಜಾತ್ರೆ: ಕುಡಿದು ಗಲಾಟೆ ಮಾಡಿದ್ರೆ, ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ರೆ‌ ದಂಡ

ಮೈಸೂರು, ಫೆ. 10 – ಗ್ರಾಮದೇವತೆ ಜಾತ್ರೇಲಿ ಕುಡಿದು ಗಲಾಟೆ ಮಾಡಿದ್ರೆ, ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ರೆ 30 ಸಾವಿರ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.

ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ಈ ರೀತಿಯಲ್ಲಿ ಡಂಗುರ ಭಾರಿಸಿ ಎಚ್ಚರಿಕೆ ನೀಡಲಾಗಿದೆ.

ಗ್ರಾಮ ದೇವತೆ ಜಾತ್ರೆ ವೇಳೆ ಯಾವುದೇ ರೀತಿಯ ವಿಡಿಯೋ ಮಾಡಿದರೆ ದಂಡ ಫಿಕ್ಸ್ ಮಾಡಿ ಯಜಮಾನರುಗಳು ಫಾರ್ಮಾನು ಹೊರಡಿಸಿದ್ದಾರೆ.

ಮಂಗಳವಾರದಿಂದ (ಫೆ10) ಮೂರು ದಿನಗಳ ಕಾಲ ಗೋಳೂರು ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ, ಅಲ್ಲಿ ಹೆಣ್ಣು ಮಕ್ಕಳ ವಿಡಿಯೋ ತೆಗೆಯುವುದು ಅಥವಾ ಕುಡಿದು ಗಲಾಟೆ ಮಾಡುವ ವಿಚಾರದಲ್ಲಿ ನಿರ್ಬಂಧ ವಿಧಿಸಿ ಗ್ರಾಮದ ನಿವಾಸಿ ಚಕ್ರಜವರ ಎಂಬುವರ ಮೂಲಕ ತಮಟೆ ಭಾರಿಸಿ ಗ್ರಾಮದಲ್ಲಿ ಡಂಗುರ ಸಾರಿಸಿದ್ದಾರೆ.

30 ದಿನಗಳವರೆಗೆ ಗ್ರಾಮದಲ್ಲಿ ಮಾಂಸಾಹಾರಿ ಊಟ ಹಾಗೂ ಒಗ್ಗರಣೆ ನಿಷೇಧ..!
ಸಾಕಷ್ಟು ವರ್ಷಗಳಿಂದಲೂ ಗ್ರಾಮ ದೇವತೆ ಮಾರಮ್ಮ ಹಬ್ಬವನ್ನು ಗ್ರಾಮದಲ್ಲಿ ಕಟ್ಟುನಿಟ್ಟಾಗಿ ಆಚರಿಸಲಾಗುತ್ತಿದೆ. ಹಬ್ಬ ಒಂದು ತಿಂಗಳು ಬಾಕಿ ಇರುವಾಗಲೇ ಗ್ರಾಮದ ಯಾವುದೇ ಜನಾಂಗದ ಬೀದಿಯ ಮನೆಗಳಲ್ಲಿ ಒಗ್ಗರಣೆ ಹಾಕುವಂತಿಲ್ಲ. ಮಾಂಸಾಹಾರಿ ಊಟವನ್ನು ಸೇವಿಸುವಂತಿಲ್ಲ ಇದು ತಾತ ಮುತ್ತಾತರ ಕಾಲದಿಂದಲೂ ನಡೆದು ಬಂದಿರುವ ಸಾಂಪ್ರದಾಯವಾಗಿದೆ ಎನ್ನುತ್ತಾರೆ ಗ್ರಾಮದ ಯಜಮಾನ ಮುದ್ದು ಮಾದಶೆಟ್ಟಿ.