ಮೈಸೂರು: ಅವಧೂತ ದತ್ತಪೀಠದ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಾಮೂಹಿಕ ‘ಶ್ರೀ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ’ ಶನಿವಾರ ಶ್ರದ್ಧೆ,ಭಕ್ತಿಭಾವದಿಂದ ನೆರವೇರಿತು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಕಿಕ್ಕಿರಿದು ಸೇರಿದ್ದ 50 ಸಾವಿರಕ್ಕೂ ಹೆಚ್ಚು ಹನುಮ ಭಕ್ತರ ಸಿರಿಕಂಠದಲ್ಲಿ ಹನುಮ ಸ್ಮರಣೆ ದೇಶ ದಿಕ್ಕಿಗೂ ಮಾರ್ದನಿಸಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರೊಂದಿಗೆ ಪವಮಾನ ಹೋಮಕ್ಕೆ ಪೂರ್ಣಾಹುತಿ ಅರ್ಪಿಸಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು, ನಂತರ ವೇದಿಕೆಗೆ ಆಗಮಿಸಿದರು.
ಈ ವೇಳೆ ಶಾಸಕರುಗಳಾದ ಶ್ರೀವತ್ಸ, ಕೆ. ಹರೀಶ್ ಗೌಡ, ಜಿ.ಟಿ. ದೇವೇಗೌಡ ಹಾಗೂ ನಗರದ ಪ್ರಮುಖ ಗಣ್ಯರು ಸ್ವಾಮೀಜಿಯವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.
‘ರಾಮ ಲಕ್ಷ್ಮಣ ಜಾನಕಿ ಜೈ ಬೋಲೋ ಹನುಮಾನ್ ಕಿ’ ಎಂಬ ಜೈ ಘೋಷದೊಂದಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುಂದರಕಾಂಡದ ಕಥಾ ನಿರೂಪಣೆಯೊಂದಿಗೆ ಸಾಗಿದ ಈ ಪಾರಾಯಣವು ಸುಮಾರು 2 ಗಂಟೆಗಳ ಕಾಲ ನಿರಂತರವಾಗಿ ನಡೆಯಿತು.
ಈ ಅವಧಿಯಲ್ಲಿ ಒಟ್ಟು 18 ಬಾರಿ ಹನುಮಾನ್ ಚಾಲೀಸಾ ಪಠಣ ಮಾಡಲಾಯಿತು.
ಕೇಸರಿಮಯವಾದ ಮೈದಾನ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರ ಕೈಯಲ್ಲಿ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು.
ಮೈದಾನದ ತುಂಬೆಲ್ಲಾ ಕೇಸರಿ ವರ್ಣದ ಧ್ವಜ ಕಳೆ ಕಟ್ಟಿದ್ದು, ಹನುಮ ಭಕ್ತರ ಸಾಗರವೇ ಹರಿದುಬಂದಂತಿತ್ತು.
ದೇಶ ವಿದೇಶದ ಹಲವು ಮಂದಿ ಹನುಮ ಭಕ್ತರು ಭಗವಧ್ವಜ ಹಿಡಿದು ನೃತ್ಯ ಮಾಡುವ ಮೂಲಕ ಹನುಮಂತನನ್ನು ಆರಾಧಿಸಿ ದ್ದು ವಿಶಿಷ್ಟವಾಗಿತ್ತು.
ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಮಂದಿ ಈ ಪಾರಾಯಣ ಮಹಾಯಜ್ಞದಲ್ಲಿ ಭಾಗಿಯಾಗಿದ್ದರು.
ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಮಹಾಯಜ್ಞ ಸಂಪನ್ನ ಗೊಂಡಿತು.

