ಅರಮನೆ ತ್ರಿಣೇಶ್ವರನಿಗೆ ಚಿನ್ನದ ಕೊಳಗ ಧಾರಣೆ:ಕಣ್ತುಂಬಿಕೊಂಡ ಭಕ್ತಸಾಗರ

ಮೈಸೂರು: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಅರಮನೆ ಆವರಣದಲ್ಲಿರುವ ತ್ರಿಣೇಶ್ವರಸ್ವಾಮಿಗೆ ಚಿನ್ನದಕೊಳಗ ಧಾರಣೆ ಮಾಡಲಾಗಿದ್ದು,ಬೆಳಗಿನಿಂದಲೇ‌ ಭಕ್ತಸಾಗರ ಆಗಮಿಸಿ ಸ್ವಾಮಿಯ ದರ್ಶನ‌ ಪಡೆದರು.

11 ಕೆಜಿ ತೂಕದ ಚಿನ್ನದ ಕೊಳಗ ಧರಿಸಿ ಕಂಗೊಳಿಸುತ್ತಿರುವ ಶಿವನ ದರುಶನಕ್ಕೆ ಭಕ್ತಸಾಗರವೇ ಹರಿದುಬಂದಿದೆ.

ಮುಂಜಾನೆ ತ್ರಿಣೇಶ್ವರನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನಂತರ ಭಕ್ತರಿಗೆ ದರುಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಮುಂಜಾನೆಯಿಂದಲೇ ಸರದಿಯಲ್ಲಿ ಬಂದ ಭಕ್ತರು ಚಿನ್ನದ ಮುಖವಾಡ ಧಾರಣೆ ಮಾಡಿದ ತ್ರಿಣೇಶ್ವರನ ದರುಶನ ಪಡೆದು‌ ಪುನೀತರಾದರು.

ಜಯಚಾಮರಾಜ ಒಡೆಯರ್ ಅವರು
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜ‌ನಿಸಿದ ವೇಳೆ ಪುತ್ರ ಸಂತಾನ ಪ್ರಾಪ್ತಿಯಾದ ಕಾರಣ ತ್ರಿಣೇಶ್ವರಸ್ವಾಮಿಗೆ ಹರಕೆ ರೂಪದಲ್ಲಿ ಚಿನ್ನದ ಕೊಳಗ ಸಮರ್ಪಿಸಿದ್ದರು.

ವರ್ಷಕ್ಕೆ ಒಮ್ಮೆ ಮಹಾಶಿವರಾತ್ರಿಯ ದಿನ ಮಾತ್ರ ತ್ರಿಣೇಶ್ವರಸ್ವಾಮಿಯ ಮೂಲ ಶಿವಲಿಂಗಕ್ಕೆ ಚಿನ್ನದ ಕೊಳಗ ಧಾರಣೆ ಮಾಡಲಾಗುತ್ತದೆ,ಹಾಗಾಗಿ ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ‌
ಆಗಮಿಸಿ ಶಿವ ದರ್ಶನ ಪಡೆಯುತ್ತಾರೆ.