ಚಾಮರಾಜನಗರ: ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಮೃತಪಟ್ಟು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ರಾಮಸಮುದ್ರದ ಹೊಸ ಹೌಸಿಂಗ್ ಬೊರ್ಡ್ ಸಮೀಪದಲ್ಲಿ ನಡೆದಿದೆ.
ನಗರದ ಬಾಬು ಜಗಜೀವನ್ ರಾಂ ಬಡಾವಣೆಯ ನಿವಾಸಿ ನಾಗಣ್ಣ(40) ಮೃತ ದುರ್ದೈವಿ. ನಾಗೇಂದ್ರ ಹಾಗೂ ವಿಷಕಂಠ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಮಸಮುದ್ರದ ಕುಲುಮೆ ರಸ್ತೆಯಲ್ಲಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಕಾಲಾವಧಿ ಹಾಕಿಕೊಂಡು ಮೊದಲ ಮಹಡಿಗೆ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಪಕ್ಕದಲ್ಲಿಯೇ ಹಾದುಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದೆ ಎನ್ನಲಾಗಿದೆ.
ಈ ವೇಳೆ ನಾಗಣ್ಣ ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ.

