ಚಾಮರಾಜನಗರ: ಕ್ಷಿಪ್ರ ಕಾರ್ಯಾಚರಣೆ
ನಡೆಸಿದ ಚಾಮರಾಜನಗರ ಪೊಲೀಸರು ರಾತ್ರಿ ವೇಳೆ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ವಿಕೃತ
ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಆರೋಪಿ ಅಮೃತ್ (24) ಬಂಧಿತ ಆರೋಪಿ.
ಚಾಮರಾಜನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಹೌಸಿಂಗ್ ಬೋರ್ಡ್ ಕಾಲೋನಿ, ಇಂದಿರಾನಗರ ಮತ್ತು ಕರಿನಂಜನಪುರ ಬಡಾವಣೆಗಳಲ್ಲಿ ಮಧ್ಯರಾತ್ರಿ ವೇಳೆ ಈ ನೀಚ ವ್ಯಕ್ತಿ ಮಹಿಳೆಯಂತೆ ಬಟ್ಟೆ ಧರಿಸಿ ಅಕ್ರಮವಾಗಿ ನಿರ್ಜನ ಪ್ರದೇಶಗಳ ಮನೆಯ ಮುಂಭಾಗದಲ್ಲಿ ಒಗೆದು ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ.
ಈ ಬಗ್ಗೆ ಬಂದ ದೂರಿನ ಮೇರೆಗೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ತಕ್ಷಣ ಪೊಲೀಸ್ ಅಧೀಕ್ಷಕರಾದ ಮುತ್ತುರಾಜು.ಎಂ ಅವರ ನಿರ್ದೇಶನದ ಮೇರೆಗೆ ಡಿ.ವೈಎಸ್‌ಪಿ ಸ್ನೇಹಾ ರಾಜ್ ನೇತೃತ್ವದಲ್ಲಿ ಸಿಪಿಐ ಸಾಗರ್.ಎಸ್.ಎಲ್ ಸಂತೇಮರಹಳ್ಳಿ ವೃತ್ತ ಹಾಗೂ ಮೋಹನ್ ಕುಮಾರ್, ಮಹದೇವ, ನಿಂಗರಾಜು, ಜಗದೀಶ,ಪಟ್ಟಣ ಪೊಲೀಸ್ ಠಾಣೆಯ ಚಿನ್ನಸ್ವಾಮಿ ಹಾಗೂ ಶರತ್ ಅವರುಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿ ಅಮೃತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಒಳ ಉಡುಪು ಕದಿಯುತ್ತಿದ್ದುದು ಗೊತ್ತಾಗಿದೆ.
ಈ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಈ ವಿಶೇಷ ತಂಡದ ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ಮುತ್ತುರಾಜು ಅವರು ಶ್ಲಾಘಿಸಿದ್ದಾರೆ.

