ಸಿಎಂ ಬದಲಾವಣೆ ಗೊಂದಲ-ಹೈಕಮಾಂಡ್ ಶೀಘ್ರ ನಿರ್ಧಾರ ಕೈಗೊಳ್ಳಲಿ:ರಾಜಣ್ಣ

ಮೈಸೂರು: ಸಿಎಂ ಬದಲಾವಣೆ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಶೀಘ್ರ ನಿರ್ಧಾರ ಕೈಗೊಳ್ಳಲಿ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಆಗ್ರಹಿಸಿದ್ದಾರೆ.

ಮೈಸೂರಿನ ಟಿ ಕೆ ಬಡಾವಣೆಯಲ್ಲಿರುವ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜಣ್ಣ ಚರ್ಚಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾಗುತ್ತಾರೆ ಅಥವಾ ಇರುತ್ತಾರೆ ಅಂತ ನಾನು ಹೇಳುವುದಿಲ್ಲ,ಆದರೆ ಹೈಕಮಾಂಡ್ ಬೇಗ ನಿರ್ಧಾರ ಕೈಗೊಳ್ಳಲಿ ನಿರ್ಧಾರ ತಡವಾದಷ್ಟು ಸರ್ಕಾರದ ಮೇಲೂ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರೇ ಪರಿಪೂರ್ಣ ಅಧಿಕಾರ ನಡೆಸಲಿ ಅಂತಾದರೂ ಹೇಳಲಿ. ಇಲ್ಲ ಬದಲಾವಣೆ ಮಾಡಲಾಗುತ್ತೆ ಎಂದಾದರೂ ಹೇಳಲಿ.ಒಟ್ಟಾರೆ ಒಂದು ನಿರ್ಧಿಷ್ಟವಾಗಿ ಹೇಳಬೇಕು,ಅದು ಬಿಟ್ಟು ಬರೀ ಗೊಂದಲವೇ ಇದ್ದರೆ ಬೇರೆ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ರಾಜಣ್ಣ‌ ತಿಳಿಸಿದರು.