ಸರ್ವರೂ ಒಂದೇ ಎಂಬ ಭಾವ ಭಾರತೀಯರಲ್ಲಿ ಮೂಡಬೇಕು:ಮೋಹನ್ ಭಾಗವತ್

ಮೈಸೂರು: ಮೇಲು-ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಭಾವ ಭಾರತೀಯರಲ್ಲಿ ಮೂಡಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತ್ ಹೇಳಿದರು.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠದ ಆವರಣದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ 15ನೇ ವಿಶೇಷ ಉಪನ್ಯಾಸದಲ್ಲಿ ‘ರಾಷ್ಟ್ರೀಯ ಅಭಿವೃದ್ಧಿಗೆ ಸಾಮಾಜಿಕ ಸೌಹಾರ್ದತೆ ಪ್ರೇರಕ’ ವಿಷಯ ಕುರಿತು ಅವರು ಮಾತನಾಡಿದರು.

ಸಹೋದರರನ್ನು ಅಸ್ಪೃಶ್ಯರಾಗಿ ಶತಮಾನಗಳಿಂದ ದೂರವಿಡಲಾಗಿದೆ. ಹೀಗಾಗಿ ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಭಾಷಣಗಳನ್ನು ಮತ್ತೊಮ್ಮೆ ಓದಿಕೊಳ್ಳಬೇಕಿದೆ. ರಾಜಕೀಯ ಮತ್ತು ಆರ್ಥಿಕ ಸಮಾನತೆಗಿಂತ ಸಾಮಾಜಿಕ ಸಮಾನತೆ ಮುಖ್ಯ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ. ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಬೆಸೆಯುವ ಕೊಂಡಿಯೇ ಬಂಧುತ್ವ. ಈ ಬಂಧುತ್ವ-ಭಾವ ಇಲ್ಲದಿದ್ದರೆ ದೇಶದ ಸ್ವಾತಂತ್ರ್ಯ ಕಾಪಾಡಿಕೊಳ್ಳುವುದು ಕಷ್ಟ ಎಂದು ಹೇಳಿದರು.

ಭಾಷೆ, ಜಾತಿ, ಪಂಗಡಗಳನ್ನು ಮೀರಿ ಬಂಧುತ್ವ ನೆಲೆಗೊಳ್ಳಬೇಕು. ಅಸ್ತಿತ್ವಕ್ಕಾಗಿ ಮತ್ತೊಬ್ಬರ ವಿರುದ್ಧ ಹೋರಾಟ ನಡೆಸುವುದು ಪಾಶ್ಚಾತ್ಯ ಪರಿಕಲ್ಪನೆಯಾಗಿದೆ. ಆದರೆ, ಭಾರತೀಯರು ಭ್ರಾತೃತ್ವ ಮತ್ತು ಪರಸ್ಪರ ಸಹಾಯದೊಂದಿಗೆ ನಾಗರಿಕತೆ ಕಟ್ಟಿದ್ದಾರೆ.

ನಮ್ಮ ಸಮಾಜವು, ಪರೋಪಕಾರವೇ ಸೇವೆ, ಕರ್ತವ್ಯವೇ ಜೀವನದ ಪರಮ ಗುರಿ‌ ಎಂದು ತಿಳಿದಿದೆ,ಪಾಶ್ಚಾತ್ಯ ದೇಶಗಳಲ್ಲಿ ಸೊಸೈಟಿ ಎಂಬ ಪರಿಕಲ್ಪನೆ ಸಾಮಾಜಿಕ ಒಪ್ಪಂದದ ಸಿದ್ಧಾಂತದ ಮೇಲೆ ನಿರ್ಮಾಣವಾಗಿದೆ. ಅಲ್ಲಿ ಜನರು ಪರಸ್ಪರ ಸಹಕಾರ ಮತ್ತು ಲಾಭದ ಉದ್ದೇಶದಿಂದ ಒಟ್ಟಿಗೆ ಬದುಕುತ್ತಾರೆ. ಆದರೆ, ಭಾರತೀಯ ಸಮಾಜದ ಪರಿಕಲ್ಪನೆ ಅದಕ್ಕಿಂತ ಭಿನ್ನವಾಗಿದೆ. ಭಾರತದಲ್ಲಿ ಸಮಾಜವೆಂದರೆ ಕೇವಲ ಜನರ ಗುಂಪು ಅಥವಾ ಒಪ್ಪಂದದ ಆಧಾರದ ಮೇಲೆ ನಿರ್ಮಾಣವಾದ ವ್ಯವಸ್ಥೆಯಲ್ಲ, ದೀರ್ಘಕಾಲ ಒಟ್ಟಿಗೆ ಬದುಕಿ, ಪರಸ್ಪರ ಆತ್ಮೀಯತೆ, ಒಂದೇತನದ ಭಾವನೆ ಹಾಗೂ ಸಾಮೂಹಿಕ ಗುರಿಯನ್ನು ಹೊಂದಿರುವ ಜನರ ಸಮೂಹವೇ ಸಮಾಜ ಎಂದು ಮೋಹನ್ ಭಾಗವತ್ ವಿವರಿಸಿದರು.

ರಾಷ್ಟ್ರವೆಂದರೆ ಕೇವಲ ರಾಜಕೀಯ ವ್ಯವಸ್ಥೆ ಅಥವಾ ಭೌಗೋಳಿಕ ಗಡಿಯಲ್ಲ. ಭೂಮಿ, ಜನರು, ಸಂಸ್ಕೃತಿ ಮತ್ತು ಸಾಮೂಹಿಕ ಚೇತನವೇ ರಾಷ್ಟ್ರದ ಮೂಲ ಅಂಶಗಳಾಗಿವೆ. ಭಾರತದಲ್ಲಿ ವಿವಿಧ ಆಡಳಿತ ವ್ಯವಸ್ಥೆ ಗಳು ಮತ್ತು ರಾಜ್ಯಗಳು ಇದ್ದರೂ ದೇಶದ ಏಕತೆಯ ಭಾವನೆ ಭೂಮಿಯೊಂದಿಗೆ ಹೊಂದಿರುವ ಆತ್ಮೀಯ ಸಂಬಂಧದಿಂದಲೇ ರೂಪುಗೊಂಡಿದೆ ಎಂದು ವಿಶ್ಲೇಷಿಸಿದರು.

ಭಾರತೀಯ ಸಮಾಜದ ಮೂಲಭೂತ ತತ್ವ ಅಂತರಂಗದಲ್ಲಿ ಏಕತೆ ಸಾಧಿಸುವುದೇ ಆಗಿದೆ ಎಂದು ಮೋಹನ್ ಭಾಗವತ್ ತಿಳಿಸಿದರು.