ಇಸ್ಪೀಟ್ ಜೂಜಾಟ ಆಡುತ್ತಿದ್ದವರು ಅರೆಸ್ಟ್: 5 ಲಕ್ಷ ಹಣ,ಕಾರು,ಬೈಕ್ ವಶ

ಚಾಮರಾಜನಗರ: ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಚಾಮರಾಜನಗರ ಜಿಲ್ಲಾ ಪೊಲೀಸರು ದಾಳಿ ಮಾಡಿ ನಗದು, ಮೊಬೈಲ್‌ಗಳು, ಕಾರು ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಎಂ ಅವರಿಗೆ ಜಿಲ್ಲೆಯಲ್ಲಿ ಒಂದು ತಂಡ ವಾಹನದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ಅಂದರ್ ಬಾಹರ್ ಇಸ್ಪೀಟಿನ ಜೂಜಾಟ ಆಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಪರ ಪೊಲೀಸ್ ಅಧೀಕ್ಷಕರಾದ ಎಂ.ಎನ್ ಶಶಿಧರ್ ಅವರಿಗೆ ನಿರ್ದೇಶನ ನೀಡಿದ್ದರು.

ಶಶಿಧರ್ ಅವರ ಮಾರ್ಗದರ್ಶನದಲ್ಲಿ ಸಂತೇಮರಹಳ್ಳಿ ವೃತ್ತದ ಸಿಪಿಐ ಎಸ್.ಎಲ್. ಸಾಗರ್ ಮತ್ತು ತಂಡದವರು ಆರೋಪಿಗಳ ಚಲನ ವಲನಗಳ ಮೇಲೆ ಗಮನ ಹರಿಸಿ, ಕುಣಗಳ್ಳಿ ರಸ್ತೆಯಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿದ್ದಾರೆ.

ಸ್ಥಳಕ್ಕೆ ವ್ಯಾಪ್ತಿಯ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ ಪಿ.ಎಸ್.ಐ ಕು.ವರ್ಷ .ಬಿ.ವಿ ಮತ್ತು ಸಿಬ್ಬಂದಿಗಳನ್ನು ಬರಮಾಡಿಕೊಂಡು ಜೂಜಾಟ ಆಡುತ್ತಿದ್ದ ಕಿರಣ್ @ಡುಲ್ಲಾ ಹಾಗೂ ಇತರೆ 6 ಜನರನ್ನು ಬಂಧಿಸಲಾಗಿದೆ.

ಅಲ್ಲದೆ ಇಸ್ಪೀಟ್ ಆಟ ಆಡಲು ಅಖಾಡದಲ್ಲಿ ಪಣವಾಗಿ ಕಟ್ಟಿದ್ದ ಒಟ್ಟು 5,08,000‌ ರೂ ನಗದು, 8 ಮೊಬೈಲ್‌ಗಳು, 1 ಕಾರು ಹಾಗೂ 3 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಈ ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ಮುತ್ತುರಾಜ್.ಎಂ ಅವರು ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.