ಶಾಂತಿ, ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಿಸಿ:ಸೀಮಾ ಲಾಟ್ಕರ್

ಮೈಸೂರು: ಮುಂಬರುವ ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕ ಮುಖಂಡರಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮನವಿ ಮಾಡಿದ್ದಾರೆ.

ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಸಿಪಿ ರಾಜೇಂದ್ರ ಅವರ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮನವಿ ಮಾಡಿದರು.

ಈ ಸಭೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು, ಮಸೀದಿ ಕಮಿಟಿ ಪದಾಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಭಾಗವಹಿಸಿದ್ದರು.

ಹಬ್ಬದ ಆಚರಣೆ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು.
ಸಂಚಾರಕ್ಕೆ ಅಡಚಣೆಯಾಗದಂತೆ ಎಚ್ಚರವಹಿಸ ಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್, ಸುಳ್ಳು ಸುದ್ದಿ ಹರಡಬಾರದು.
ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು.
ಯಾವುದೇ ಅಹಿತಕರ ಘಟನೆ ನಡೆದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಆಯುಕ್ತರು ‌ಸಲಹೆ ನೀಡಿದರು.

ಮೈಸೂರು ಶಾಂತಿ-ಸೌಹಾರ್ದತೆಗೆ ಹೆಸರಾದ ನಗರ. ಎಲ್ಲ ಸಮುದಾಯದವರು ಪರಸ್ಪರ ಸಹಕಾರದಿಂದ ಹಬ್ಬ ಆಚರಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸೀಮಾ ಲಾಟ್ಕರ್ ತಿಳಿಸಿದರು.

ಶಾಂತಿ ಸಭೆಯಲ್ಲಿ ನಗರದ ವಿವಿಧ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು, ಮುಸ್ಲಿಂ ಧಾರ್ಮಿಕ ಮುಖಂಡರು, ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.