ಸಿಇಐಆರ್ ಪೋರ್ಟಲ್ ಮೂಲಕ
35 ಲಕ್ಷ ಮೌಲ್ಯದ ಫೋನ್‌ ಪತ್ತೆ

ಮೈಸೂರು, ಜೂ. 2: ಕಳೆದುಹೋದ ಅಥವಾ ಕಳುವಾದ ಮೊಬೈಲ್‌ಗಳನ್ನು ಪತ್ತೆ ಹಚ್ಚಲು ಕೇಂದ್ರ ದೂರಸಂಪರ್ಕ ಇಲಾಖೆಯ ಸಿಇಐಆರ್ (CEIR) ಪೋರ್ಟಲ್ ಮೈಸೂರು ಜಿಲ್ಲೆಯಲ್ಲಿ ಪರಿಣಾಮ ಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಅತ್ಯಂತ ಒಳ್ಳೆಯ ಬೆಳವಣಿಗೆಯಾಗಿದೆ.

ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ಪೋರ್ಟಲ್ ಬಳಕೆ ಹೆಚ್ಚಾಗಿದ್ದು, ಕಳೆದ ಮೂರು ತಿಂಗಳಲ್ಲಿ 35 ಲಕ್ಷ ರೂ. ಮೌಲ್ಯದ 173 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ‌ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿವೈಎಸ್‌ಪಿ ಶ್ರೀಕಾಂತ್ ಆರ್. ಅವರು CEIR ಪೋರ್ಟಲ್‌ನ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2026ರ ಜನವರಿಯಿಂದ ಮಾರ್ಚ್‌ವರೆಗೆ ಜಿಲ್ಲೆಯಾದ್ಯಂತ 263 ದೂರುಗಳು ದಾಖಲಾಗಿದ್ದು, ಠಾಣಾಧಿಕಾರಿಗಳು ಹಾಗೂ ಸೆಲ್ಯುಲರ್ ಕಂಪನಿಗಳ ಸಮನ್ವಯದೊಂದಿಗೆ 173 ಆಂಡ್ರಾಯ್ಡ್ ಮತ್ತು ಐಫೋನ್‌ಗಳನ್ನು ಪತ್ತೆ ಹಚ್ಚಲಾಗಿದ್ದು ಕೆಲ‌ ವಾರಸುದಾರರಿಗೆ ಹಿಂದಿರುಗಿಸಲಾಯಿತು.