ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳು ಅಂದರ್

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಆಕ್ರಮವಾಗಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ವಿಶೇಷ ಹುಲಿ ಸಂರಕ್ಷಣಾ ದಳ ಬಂಧಿಸಿದೆ.

ಇಂದು ಮುಂಜಾನೆ ಎಸ್‌ಟಿಪಿಎಫ್ ಪ್ಲಟೂನ್-1ನೇ ತುಕಡಿಯು ವಡ್ಡರಹಳ್ಳಿ ಗ್ರಾಮದ ಬಳಿ ಗಸ್ತು ತಿರುಗುತ್ತಿದ್ದಾಗ ಈ ಆರೋಪಿಗಳನ್ನು ಬಂಧಿಸಲಾಗಿದೆ.

ಕೃತ್ಯದಲ್ಲಿ ಭಾಗಿಯಾಗಿರುವ ಇತರೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಹುಡುಕಾಟ ನಡೆದಿದೆ.

ಬಂಧಿತರನ್ನು ಹಾಗೂ ಜಫ್ತಿ ಮಾಡಲಾದ ವಸ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಗುಂಡ್ಲುಪೇಟೆ ಬಫರ್ ವಲಯದ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರಾದ ನಂದೀಶ್ ರವರ ನಿರ್ದೇಶನದಂತೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ರವರ ಉಸ್ತುವಾರಿಯಲ್ಲಿ ಹಾಗೂ ವಲಯ
ಅರಣ್ಯಾಧಿಕಾರಿ ವೆಂಕಟೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ವಿಶೇಷ ಹುಲಿ ಸಂರಕ್ಷಣಾ ದಳದ ಮೇಲುಕಾಮನಹಳ್ಳಿ ಪ್ಲಟೂನ್-1 ರ ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ್ ಎಂ. ಕಾರ್ತಿಕ್ ಯಾದವ್, ಅಮ‌ರ್, ಆನಂದ್‌, ರವಿಕುಮಾರ್, ವಿನಯ್, ಚಂದ್ರಶೇಖರ್, ಯಾಸೀನ್ ಮತ್ತು ನಾರಾಯಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.