ಮೈಸೂರು ದಸರಾದಲ್ಲಿ ವಿಜೃಂಭಣೆಯ ಕಂಬಳ: ಅಶೋಕ್ ರೈ

ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲು ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದು ವಿಜೃಂಭಣೆಯಿಂದ ಕಂಬಳ ನಡೆಸುತ್ತೇವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದರು.

ಮೈಸೂರು ದಸರಾದಲ್ಲಿ ಕಂಬಳ ನಡೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಅಶೋಕ್ ರೈ ಸ್ಥಳ ಪರಿಶೀಲನೆ ನಡೆಸಿ,ನಂತರ ಮಾಧ್ಯಮದೊಂದಿಗೆ ಮಾತನಾಡಿದರು.

ಕಳೆದ ಬಾರಿಯೇ ಕಂಬಳ ಮಾಡಬೇಕಿತ್ತು, ಅಂತಿಮ ಕ್ಷಣದಲ್ಲಿ ಅದು ಸಾಧ್ಯವಾಗಲಿಲ್ಲ, ಹಾಗಾಗಿ ಈ ಬಾರಿ ಕಂಬಳಕ್ಕೆ ಸಾತಗಳ್ಳಿ ಹಾಗೂ ವಿಜಯನಗರ ಬಳಿ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಸಾತಗಳ್ಳಿ ಬಳಿ ವಿಶಾಲವಾದ ಜಾಗ ಇದ್ದು, ವಾಹನಗಳ ಪಾರ್ಕಿಂಗ್‌ಗೂ ಸೂಕ್ತವಾಗಿದೆ. ಆದರೆ ಇನ್ನೂ ಯಾವುದೇ ಸ್ಥಳವನ್ನು ಅಂತಿಮಗೊಳಿಸಿಲ್ಲ‌ ಎಂದು ಶಾಸಕರು ತಿಳಿಸಿದರು.

ಸಾತಗಳ್ಳಿ ಜಾಗ ಸೂಕ್ತ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ,ಸಿಎಂ ಅವರಿಗೆ ಸ್ಥಳದ ಕುರಿತು ಮಾಹಿತಿ ನೀಡುತ್ತೇವೆ,ಅವರು ಅಂತಿಮ‌ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಕಂಬಳ ಎಂದರೆ ಕೋಣಗಳು ಮತ್ತು ಮನುಷ್ಯರ ನಡುವಿನ ಸಂಬಂಧ, ಪ್ರೀತಿ. ಈ ಬಾರಿ 150 ರಿಂದ 200 ಕಂಬಳ ಕೋಣಗಳು ಭಾಗವಹಿಸಲಿವೆ ಎರಡು ದಿನಗಳ ಕಾಲ ಹಗಲು-ರಾತ್ರಿ ಕಂಬಳ ನಡೆಯಲಿದೆ. ವಿಐಪಿ, ವಿವಿಐಪಿ ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುತ್ತದೆ ಎಂದು ಹೇಳಿದರು.

ಕಂಬಳದ ಜೊತೆಗೆ ದಕ್ಷಿಣ ಕನ್ನಡದ ಆಹಾರ ವೈವಿಧ್ಯತೆಯ ಸ್ಟಾಲ್‌ಗಳನ್ನು ಹಾಕಲಾಗುವುದು. ಆಯೋಜನೆಗೆ 5 ರಿಂದ 8 ಕೋಟಿ ರೂ. ಖರ್ಚಾಗುವ ಸಾಧ್ಯತೆ ಇದೆ, ಬೆಂಗಳೂರು ಕಂಬಳಕ್ಕೆ 15 ಕೋಟಿ ರೂ. ಖರ್ಚಾಗಿತ್ತು. ಕೆಲವು ಪ್ರಾಯೋಜಕರನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಅಶೋಕ್ ರೈ ತಿಳಿಸಿದರು.

ಸುಮಾರು 8 ಸಾವಿರ ಜನರು ಕುಳಿತು ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಗೆಲ್ಲುವ ಕೋಣಗಳಿಗೆ ಚಿನ್ನದ ಬಹುಮಾನ ನೀಡಲಾಗುವುದು. ಕಂಬಳ ವೀಕ್ಷಣೆಗೆ ಯಾವುದೇ ಶುಲ್ಕವಿಲ್ಲ ಎಂದು ‌ಶಾಸಕರು ಸ್ಪಷ್ಟಪಡಿಸಿದರು.

ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಕೋಣಗಳು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಅಶೋಕ್ ರೈ ವಿವರಿಸಿದರು.