8.2 ಕೋಟಿ ಟ್ರಾಫಿಕ್ ಸಿಗ್ನಲ್; ಸಾರ್ವಜನಿಕ ಹಣದ ದುರುಪಯೋಗ: ಯದುವೀರ್

ಮೈಸೂರು: ಮೈಸೂರು ನಗರದಲ್ಲಿ ಸುಮಾರು 8.2 ಕೋಟಿ ವೆಚ್ಚದಲ್ಲಿ ಅಳವಡಿಸಿರುವ 50 ಟ್ರಾಫಿಕ್ ಸಿಗ್ನಲ್‌ಗಳು ಸಾರ್ವಜನಿಕ ಹಣದ ದುರುಪಯೋಗಕ್ಕೆ ಉದಾಹರಣೆಯಾಗಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದ್ದಾರೆ.

ಈ ಯೋಜನೆಯನ್ನು ಮೂಲಭೂತ ನಗರ ಸಂಚಾರ ಯೋಜನೆಗಳಾದ ಪಾದಚಾರಿ, ಸಂಚಾರ ಗಣತಿ, ತಾಂತ್ರಿಕ ಮತ್ತು ಇಂಜಿನಿಯರಿಂಗ್ ಸಮೀಕ್ಷೆ, ಕಾರ್ಯಸಾಧ್ಯತಾ ಅಧ್ಯಯನ ಹಾಗೂ ನಾಗರಿಕರೊಂದಿಗೆ ಸಮಾಲೋಚನೆ ನಡೆಸದೆ ಜಾರಿಗೊಳಿಸಲಾಗಿದೆ ಎಂದು ಅವರು ಟೀಕಿಸಿದ್ದಾರೆ.

ಯೋಜನೆಯ ಉದ್ದೇಶವೇ ವಿಫಲವಾಗಿರುವುದು ಸ್ಪಷ್ಟವಾಗಿದೆ, ನಗರದಲ್ಲಿನ ಅನೇಕ ಟ್ರಾಫಿಕ್ ಸಿಗ್ನಲ್‌ಗಳು ಪ್ರಸ್ತುತ ಕಾರ್ಯನಿರ್ವಹಿಸದೆ ಇರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಸಂಸದರು ಹೇಳಿದರು.

ಸಾರ್ವಜನಿಕರ ತೆರಿಗೆ ಹಣವನ್ನು ಸಮರ್ಪಕ ಪರಿಶೀಲನೆ ಇಲ್ಲದೆ ಖರ್ಚು ಮಾಡಿರುವ ಈ ಯೋಜನೆ ಕುರಿತು ತಕ್ಷಣವೇ ಉತ್ತರದಾಯಿತ್ವ ನಿಗದಿಪಡಿಸಿ, ಸಂಬಂಧಪಟ್ಟ ನಗರಾಡಳಿತ ಅಧಿಕಾರಿಗಳಿಂದ ಸ್ಪಷ್ಟನೆ ಪಡೆಯಬೇಕು ಎಂದು ಯದುವೀರ್ ಆಗ್ರಹಿಸಿದ್ದಾರೆ.