ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅಶ್ಲೀಲ ಕಮೆಂಟ್ ಹಾಕಿದ ಆರೋಪಿಯನ್ನು ಕೂಡಲೇ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಅವರ ಪತ್ನಿ ವರ್ಷಾ ಹರೀಶ್ ಗೌಡ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಅಶ್ಲೀಲ ಕಮೆಂಟ್ ಹಾಕಿದವರ ವಿರುದ್ಧ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿ 10 ದಿನಗಳಾಗಿವೆ .ಆದರೆ ಇಲ್ಲಿಯವರೆಗೂ ಆರೋಪಿಯನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಂತ್ರಜ್ಞಾನ ಇದ್ದೂ ಪೊಲೀಸರಿಂದ ಕ್ರಮವಿಲ್ಲ
ಇಂದಿನ ದಿನಗಳಲ್ಲಿ ತಂತ್ರಜ್ಞಾನ ಬಹಳ ಮುಂದುವರಿದಿದೆ. ಯಾವುದೇ ಸಾಮಾಜಿಕ ಜಾಲತಾಣ ಖಾತೆ ತೆರೆಯಲು ಇ-ಮೇಲ್ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯ. ಇದರ ಆಧಾರದಲ್ಲೇ ವಿಕೃತಿ ಮೆರೆದವರನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಹೀಗಿದ್ದರೂ ದೂರು ನೀಡಿ ಹತ್ತು ದಿನವಾದರೂ ಆರೋಪಿ ಪತ್ತೆಯಾಗದಿರುವುದು ಆತಂಕವಾಗಿದೆ ಎಂದು ಹೇಳಿದರು.
ದೂರು ನೀಡಿದರೂ ಪೊಲೀಸರು ಕ್ರಮವಹಿಸದಿರುವುದರಿಂದ ಅಶ್ಲೀಲ ಕಮೆಂಟ್ ಹಾಕಿದ ಆರೋಪಿ ಪ್ರಭಾವಿ ವ್ಯಕ್ತಿಯಾಗಿರಬಹುದು, ಪ್ರಭಾವ ಬಳಸಿ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿರಬಹುದೇನೊ ಎಂಬ ಅನುಮಾನ ಮೂಡಿದೆ ಎಂದು ವರ್ಷಾ ಹರೀಶ್ ಗೌಡ ತಿಳಿಸಿದರು.
ಈ ಪ್ರಕರಣ ತಮ್ಮ ಮನಸ್ಸಿಗೆ ತೀವ್ರ ಆಘಾತ ತಂದಿದೆ. ಪೊಲೀಸರು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ಕೂಡಲೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವರ್ಷಾ ಆಗ್ರಹಿಸಿದರು.
ಈ ವಿಷಯದಲ್ಲಿ ನನಗೆ ಯಾರ ಮೇಲೂ ವೈಯಕ್ತಿಕ ಅನುಮಾನವಿಲ್ಲ. ನಾನು ಹುಣಸೂರು ಕ್ಷೇತ್ರದ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದೇನೆ. ಜನರ ಸಮಸ್ಯೆ ಆಲಿಸಲು ಹೋಗುತ್ತೇನೆ. ಜನರು ನನ್ನನ್ನು ಪ್ರೀತಿ-ಅಭಿಮಾನದಿಂದ ಕಾಣುತ್ತಾರೆ. ಇದನ್ನು ಸಹಿಸದವರು ಈ ರೀತಿ ಮಾಡಿರಬಹುದು. ನಾನು ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದಿದ್ದರೂ ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ಮುಂದೆ ಚುನಾವಣೆಗೆ ಸ್ಪರ್ಧಿಸುವ ಉದ್ದೇಶವೂ ಇಲ್ಲ ಎಂದು ವರ್ಷಾ ಪ್ರಶ್ನೆಯೊಂದಕ್ಕೆ ಸ್ಪಷ್ಟ ಉತ್ತರ ನೀಡಿದರು.

