ಮೈಸೂರು: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿ ವ್ಯಾಪ್ತಿಯಲ್ಲಿ ಸರಿಯಾಗಿ ಮುಂಗಾರು ಮಳೆಯಾಗದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೇರೆ ಬೆಳೆಯನ್ನೂ ಬೆಳೆಯಲಾಗದೆ, ಬೆಳೆದ ಬೆಳೆಯೂ ಒಣಗುತ್ತಿರುವುದರಿಂದ ರೈತರು ವರುಣನ ಕೃಪೆಗಾಗಿ ಆಗಸದತ್ತ ನೋಡುತ್ತಿದ್ದಾರೆ.
ದೂರ, ಮುರುಡಗಳ್ಳಿ, ಉದ್ಬೂರು, ದೊಡ್ಡಕಾಟೂರು, ತಳೂರು, ಮಾರ್ಬಳ್ಳಿ, ಮಾರ್ಬಳ್ಳಿಹುಂಡಿ, ಕೆಲ್ಲಹಳ್ಳಿ, ಟಿ.ಕಾಟೂರು, ಅರಸಿನಕೆರೆ, ಹಾರೋಹಳ್ಳಿ, ಗುಜ್ಜೇಗೌಡನಪುರ, ಮಂಡನಹಳ್ಳಿ, ಮದ್ದೂರು, ಕಲ್ಲಹಳ್ಳಿ ಸೇರಿದಂತೆ ಹೋಬಳಿಯ ಬಹುತೇಕ ಗ್ರಾಮಗಳ ರೈತರು ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ.
ವಿವಿಧ ಗ್ರಾಮಗಳಲ್ಲಿ ರೈತರು ಹೆಸರು, ಅಲಸಂದೆ, ಉದ್ದು, ಅವರೆಕಾಯಿ ಹಾಗೂ ಕೆಲವು ತರಕಾರಿಗಳನ್ನು ಬೆಳೆದಿದ್ದು, ಹೂ ಬಿಡುವ ಹಂತದಲ್ಲಿದೆ,ಆದರೆ ಮಳೆ ಕೈಕೊಟ್ಟ ಕಾರಣ ರೈತರು ನಿರಾಶರಾಗಿದ್ದಾರೆ
ಕಳೆದ ವರ್ಷ ಉತ್ತಮ ಮಳೆಯಾದರೂ ಬೆಳೆಗೆ ಉತ್ತಮ ಬೆಲೆ ದೊರಕಲಿಲ್ಲ, 5-6 ವರ್ಷಗಳಿಂದ ಬಿತ್ತನೆಗೆ ಮಾಡಿದ ಖರ್ಚೂ ದೊರಕುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ
ಹೋಬಳಿ ವ್ಯಾಪ್ತಿಯ ಕೆರೆ-ಕಟ್ಟೆಗಳ ನೀರು ಬಿಸಿಲ ಝಳಕ್ಕೆ ಬರಿದಾಗುತ್ತಿದೆ. ಅಂತರ್ಜಲ ಮಟ್ಟ ಕುಸಿದಿದ್ದು ಬೋರ್‌ವೆಲ್‌ಗಳಲ್ಲೂ ನೀರಿನ ಮಟ್ಟ ಕಡಿಮೆಯಾಗುತ್ತಿದೆ,ಆದ್ದರಿಂದ ರೈತರಲ್ಲಿ ಆತಂಕ ಹೆಚ್ಚಾಗುತ್ತಿದೆ.
ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಹೋಬಳಿ ಕೇಂದ್ರಗಳಲ್ಲಿ ದನ-ಕರುಗಳಿಗೆ ಮೇವು ಕೇಂದ್ರಗಳನ್ನು ತೆರೆಯಬೇಕು. ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

