(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)
ಚಾಮರಾಜನಗರ: ಚಾಮರಾಜನಗರ ಪಟ್ಟಣ ಒಳ ಹಾಗೂ ಹೊರಭಾಗದಲ್ಲಿ ಅಪರಾಧ ಸಂಖ್ಯೆ, ಕುಕೃತ್ಯ ತಡೆಯುವಲ್ಲಿ ಸಹಕಾರಿಯಾದ ಎ ಎನ್ ಪಿ ಆರ್ ಕ್ಯಾಮರಾಗಳ ಚಾಲನೆ ಇನ್ನೂ ಕನಸಾಗೆ ಇದೆ.
ಜಿಲ್ಲೆಯಲ್ಲಿ ಈಗಾಗಲೇ 14 ಕಡೆಗಳಲ್ಲಿ ಎ ಎನ್ ಪಿ ಆರ್ ಕ್ಯಾಮರಾಗಳನ್ನು ಅಳವಡಿಸಲು ಸ್ಥಳಗಳನ್ನು ಗುರುತಿಸಲಾಗಿದೆ, ಕೇಂದ್ರದ ನಾಲ್ಕು ಕಡೆ ತಲಾ ಎರಡರಂತೆ 8 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಉಳಿದ ಕ್ಯಾಮೆರಾಗಳನ್ನು ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಜಿಲ್ಲಾ ಕೇಂದ್ರದ ಪ್ರಮುಖ ವೃತ್ತಗಳಲ್ಲಿ ಅಳವಡಿಕೆ ಮಾಡಿ ಕಾರ್ಯ ರೂಪಕ್ಕೆ ತರುವುದಷ್ಟೇ ಬಾಕಿ ಇದೆ ಎಂದು ೨೦೨೬ ರ ಪೆಬ್ರವರಿ ಮಾಹೆಯಲ್ಲಿ ಹೇಳಲಾಗಿತ್ತು.
ಈಗಾಗಲೇ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಾದ ನಂಜನಗೂಡು ರಸ್ತೆಯ ಕಾಳನಹುಂಡಿ ತಿರುವು, ಸಂತೇಮರಹಳ್ಳಿ ರಸ್ತೆಯ ದೊಡ್ಡರಾಯಪೇಟೆ ಗೇಟ್, ಗುಂಡ್ಲುಪೇಟೆ ರಸ್ತೆಯ ಬೈಪಾಸ್ ಬಳಿಯ ಪೆಟ್ರೋಲ್ ಬಂಕ್ ಹಾಗೂ ಸತ್ಯಮಂಗಲ ರಸ್ತೆಯ ಸೋಮವಾರಪೇಟೆ ಬಳಿ ಬೈಪಾಸ್ ರಸ್ತೆಯಲ್ಲಿ ಎರಡು ದಿಕ್ಕಿನಿಂದ ಬರುವಂತಹ ವಾಹನ ಸೆರೆಹಿಡಿಯಲು ತಲಾ 2ರಂತೆ 8 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಎನ್‌ಐಸಿಯಿಂದ ಅನುಮತಿ ಬಂದ 20 ದಿನದೊಳಗೆ ಕಾರ್ಯರೂಪಕ್ಕೆ ತರಲಾಗುವುದು, ಎಂದು ಎಸ್ಪಿ ಮುತ್ತುರಾಜು ಮಾಹಿತಿ ನೀಡಿದ್ದರು.
ಈ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮಗಳಾದ ಸೀಟ್ ಬೆಲ್ಟ್, ತ್ರಿಬಲ್ ರೈಡಿಂಗ್,ಮೊಬೈಲ್ ಬಳಸುತ್ತಾ ವಾಹನ ಚಾಲನೆ, ಹೆಲೈಟ್ ಧರಿಸದೇ ಚಾಲನೆ ಸೇರಿದಂತೆ ಇನ್ನಿತರ ನಿಯಮಗಳನ್ನು ಪಾಲಿಸದೆ ವಾಹನಗಳನ್ನು ಚಲಾಯಿಸುವಂತಹ ವಾಹನಗಳ ನಂಬರ್, ಫೋಟೊವನ್ನು ಸೆರೆಹಿಡಿದು ಅವರ ಮನೆಯ ಬಾಗಿಲಿಗೆ ಹಾಗೂ ಅವರ ದೂರವಾಣಿ ಸಂಖ್ಯೆಗೆ ನೋಟಿಸ್ ಕಳುಹಿಸುವ ಕೆಲಸವಾಗುತ್ತದೆ ಎಂಬುದು ತಜ್ಞರ ಅಬಿಪ್ರಾಯ.
ಎಎನ್‌ಆರ್ ಪಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಚಾಲನಾ ವೇಗದಿಂದ ಆಗುವ ಅಪಘಾತ ಪ್ರಮಾಣದ ಸಂಖ್ಯೆಗಳನ್ನು ತಡೆಗಟ್ಟಬಹುದಾಗಿದೆ. ಇದರಿಂದ ಬಹು ಗಾತ್ರದ ವಾಹನಗಳ ಅತಿವೇಗಕ್ಕೆ ಬ್ರೇಕ್ ಹಾಕಬಹುದಾಗಿದ್ದು, ಜಿಲ್ಲೆಯ ಹೆದ್ದಾರಿಯಲ್ಲಿ ನಿತ್ಯ ನಡೆಯುವ ನಾನಾ ಅಪಘಾತಗಳನ್ನು ತಡೆಯಲು ಹಾಗೂ ಅಂತಹ ಅಪಘಾತ ವಾಹನ ತಪ್ಪಿಸಿಕೊಂಡು ಹೋಗುವುದಕ್ಕೆ ಕಡಿವಾಣ ಹಾಕುವ ಜೊತೆಗೆ ಪತ್ತೆ ಮಾಡಲು ಇದು ಸಹಕಾರಿಯಾಗಲಿದೆ.
ಈ ಕ್ಯಾಮೆರಾಗಳು ಕಾರ್ಯರೂಪಕ್ಕೆ ಬಂದ ಕೂಡಲೇ ಇದರಿಂದ ಕೇವಲ ಅಪಘಾತ, ಸಂಚಾರ ನಿಯಮ ಉಲ್ಲಂಘನೆಗೆ ಯಂತಹ ಅಪರಾಧ ಪ್ರಕರಣಗಳಿಗೂ ಕಡಿವಾಣ ಬೀಳಲಿದೆ.
ರಾತ್ರಿ ವೇಳೆ ನಡೆಯುವ ಕಳ್ಳತನ, ದರೋಡೆ ಸಮಯದಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಲು ರಸ್ತೆ ಬದಿಯಲ್ಲಿರುವ ಅಂಗಡಿ ಮುಂಗಟ್ಟುಗಳ ಸಿಸಿ ಟಿವಿಗಳನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ವಾಹನಗಳ ನಂಬರ್ ಸರಿಯಾಗಿ ಕಾಣದೇ, ವ್ಯಕ್ತಿಗಳ ಚಿತ್ರಣ ಅಸ್ಪಷ್ಟವಾಗಿ ಕಾಣುತ್ತಿದ್ದರಿಂದ ಆರೋಪಿಗಳನ್ನು ಸೆರೆಹಿಡಿಯಲು ಕಷ್ಟವಾಗುತ್ತಿತ್ತು. ಆದರೆ, ಈಗ ಈ ಕ್ಯಾಮೆರಾಗಳ ಅಳವಡಿಕೆಯಿಂದ ಇಂತಹ ಅಪರಾಧ ಕೃತ್ಯಗಳಿಗೂ ಬ್ರೇಕ್ ಹಾಕಬಹುದಾಗಿದೆ ಎಂದು ಹೇಳಲಾಗುತ್ತಿದೆ.
ಎಎನ್‌ಪಿಆರ್ ಕ್ಯಾಮೆರಾ ಗಳನ್ನು ಅಳವಡಿಸಲು ಜಿಲ್ಲೆಯಲ್ಲಿ 7 ಸ್ಥಳಗಳನ್ನು ಗುರುತಿಸಲಾಗಿದ್ದು, 14 ಕ್ಯಾಮೆರಾಗಳು ಬಂದಿವೆ. ಎನ್ ಐಸಿ (ರಾಷ್ಟ್ರೀಯ ಮಾಹಿತಿ ಕೇಂದ್ರ) ಯಿಂದ ಅನುಮತಿ ಬಂದ ಕೂಡಲೇ ಕಾರ್ಯ ರೂಪಕ್ಕೆ ತರಲಾಗುವುದು ಎಂದು ಎಸ್ಪಿ ಮುತ್ತುರಾಜ್ ಅವರು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಹೇಳಿದ್ದರು ಅಷ್ಟೆ ಅಲ್ಲ ಕಳೆದ ತಿಂಗಳಷ್ಟೆ ಪೊಲೀಸ್ ಚೌಕಿ ಉದ್ಘಾಟನಾ ಸಂದರ್ಭದಲ್ಲು ಹೇಳಿದ್ದರು, ಇದಾಗಿ ಒಂದು ತಿಂಗಳಾದರೂ ಕಾರ್ಯ ರೂಪಕ್ಕೆ ಬಾರದಿರುವುದು ವಿಪರ್ಯಾಸವಾಗಿದೆ.
ಈಗಾಗಲೆ ಎಸ್ಪಿ ಕಚೇರಿಯ ಕೊಠಡಿಯೊಳಗೆ ಕ್ಯಾಮರಾ ಕಣ್ಗಾವಲಿನ ಕೇಂದ್ರ ಸ್ಥಾಪಿತವಾಗಿ 50 ಕ್ಕೂ ಹೆಚ್ಚು ಕ್ಯಾಮರಾ ಸಿದ್ದಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ,ಅಗತ್ಯ ಸಿಬ್ಬಂದಿಗೆ ತರಬೇತಿ, ಸಿಬ್ಬಂದಿ ಸಂಪನ್ಮೂಲದ ಕೊರತೆ, ಮೇಲಾದಿಕಾರಿಗಳ ಅನುಮತಿ ಇನ್ನಿತರ ಸಮಸ್ಯೆಯಿಂದಾಗಿ ವಿಳಂಬಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಒಟ್ಟಾರೆ ನಾಲ್ಕು ಭಾಗದ ಕ್ಯಾಮರಾಗಳು ಸಿದ್ದವಾದರೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಇನ್ಸ್ ಪೆಕ್ಟರ್ ಗಳು ದಂಡ ಯಂತ್ರ ಬಳಸಿ ವಾಹನ ತಡೆದು ದಂಡ ಹಾಕೊ ಯೋಜನೆ ನಿಲ್ಲುವುದೆ ಎಂಬುದೇ ಯಕ್ಷಪ್ರಶ್ನೆ.
ಈ ಸಮಸ್ಯೆಗೂ ಮುಕ್ತಿ ಕಾಣಿಸಲು ಕ್ಯಾಮರಾ ಸಹಕಾರಿಯಾಗಲಿದಿಯೆ ಎಂಬುದನ್ನು ಕಾದುನೋಡಬೇಕಾಗಿದೆ.

