ಅದ್ದೂರಿ ಗಜಪಯಣಕ್ಕೆ ಡಾ.ಯತೀಂದ್ರ ಚಾಲನೆ

ಮೈಸೂರು: ಮೈಸೂರು ದಸರಾ-2026ರ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿ ಚಾಲನೆ ನೀಡಿದರು.

ಮೆರಗು ನೀಡಿದ ಕಲಾತಂಡಗಳ ವೈಭವ, ವಿದ್ಯಾರ್ಥಿಗಳ ನೃತ್ಯ:
ಗಜಪೂಜೆ ನಂತರ ಸಚಿವ ಡಾ.ಯತೀಂದ್ರ ಆನೆಗಳಿಗೆ ಬೆಲ್ಲ, ಕಬ್ಬು ನೀಡಿ ಗಜಪಯಣಕ್ಕೆ ಚಾಲನೆ ನೀಡಿದರು. ಆನೆಗಳು ಸಾಂಕೇತಿಕವಾಗಿ ಹೆಜ್ಜೆ ಹಾಕಿದ ನಂತರ ಲಾರಿಗಳ ಮೂಲಕ ಮೈಸೂರಿನತ್ತ ಹೊರಟವು.

ಗಜಪಯಣಕ್ಕೆ ಮೆರಗು ನೀಡಲು ಜಾನಪದ ಕಲಾ ತಂಡಗಳಾದ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಪೂಜಾ ಕುಣಿತ ತಂಡಗಳು ಅದ್ಧೂರಿ ಪ್ರದರ್ಶನ ನೀಡಿದವು. ಜೊತೆಗೆ ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಾಡಗೀತೆ, ಜಾನಪದ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ಸುಮಾರು 170 ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಎನ್.ಟಿ.ಆರ್ ಗೇಟ್ ನಿಂದ ವೇದಿಕೆಯವರೆಗೆ ಸುಮಾರು 1 ಕಿ.ಮೀ ಮಿನಿ ಮೆರವಣಿಗೆ ನಡೆಯಿತು.

9 ಆನೆಗಳ ಆಗಮನ, ಅಭಿಮನ್ಯುಗೆ ಬೀಳ್ಕೊಡುಗೆ:
ಮೊದಲ ಹಂತದಲ್ಲಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿ, ಏಕಲವ್ಯ, ಧನಂಜಯ, ಗೋಪಿ, ಕಾವೇರಿ, ಪ್ರಶಾಂತ ಮತ್ತು ಶ್ರೀರಾಮ ಎಂಬ 9 ಆನೆಗಳು ಪ್ರಯಾಣ ಬೆಳೆಸಿದವು.

ಕಳೆದ 6 ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಆನೆಗೆ ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡಲಾಯಿತು. ಸಚಿವರು ಅಭಿಮನ್ಯುವಿಗೆ ಹಾರ ಹಾಕಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಅನಿಲ್ ಕುಮಾರ್ ಸಿ, ಜಿ.ಡಿ.ಹರೀಶ್ ಗೌಡ, ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್, ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಹರಿದ್ದರು.