ಮೈಸೂರು: ಮೈಸೂರಿನ ಜನಪ್ರಿಯ ವಾಯುವಿಹಾರ ತಾಣವಾದ ಲಿಂಗಾಂಬುಧಿ ಕೆರೆ ಆವರಣಕ್ಕೆ ಪ್ರವೇಶ ಶುಲ್ಕ ನಿಗದಿಪಡಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಆದರೆ ಇದನ್ನು ಖಂಡಿಸಿ ವಾಯುವಿಹಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
80 ಎಕರೆ ವಿಸ್ತೀರ್ಣದ ಲಿಂಗಾಂಬುಧಿ ಕೆರೆ ಮತ್ತು ಪಾರ್ಕ್ ನಿರ್ವಹಣೆ ಅನುದಾನದ ಕೊರತೆಯಿಂದಾಗಿ ಕಷ್ಟಕರವಾಗಿದೆ. ಹೀಗಾಗಿ ಸರ್ಕಾರದ ನಿರ್ದೇಶನದಂತೆ ಸೆಪ್ಟೆಂಬರ್ 1 ರಿಂದ ಪ್ರವೇಶ ಶುಲ್ಕವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಅರಣ್ಯ ಇಲಾಖೆ ತಿಳಿಸಿದೆ.
ಅರಣ್ಯ ಇಲಾಖೆ ಹೊರಡಿಸಿರುವ ನೂತನ ದರ ಪಟ್ಟಿಯ ಪ್ರಕಾರಪ್ರೌಢರಿಗೆ / ವಯಸ್ಕರಿಗೆ: ದಿನದ ಪ್ರವೇಶಕ್ಕೆ 10 ರೂ, ತಿಂಗಳ ಪಾಸ್ 250 ರೂ.
ಹಿರಿಯ ನಾಗರಿಕರಿಗೆ ತಿಂಗಳ ಪಾಸ್ 200 ರೂ.
ಮಕ್ಕಳಿಗೆ: ದಿನದ ಪ್ರವೇಶಕ್ಕೆ 5ರೂ ತಿಂಗಳ ಪಾಸ್ 100 ರೂ.
ಪ್ರತಿದಿನ ನೂರಾರು ಜನ ಬೆಳಿಗ್ಗೆ-ಸಂಜೆ ವಾಕಿಂಗ್, ಜಾಗಿಂಗ್, ಯೋಗಕ್ಕಾಗಿ ಕೆರೆಗೆ ಬರುತ್ತಾರೆ. ಇದುವರೆಗೂ ಉಚಿತವಾಗಿದ್ದ ಪ್ರವೇಶಕ್ಕೆ ಈಗ ಹಣ ಕೇಳುತ್ತಿರುವುದು ಸರಿಯಲ್ಲ ಎಂದು ವಾಯುವಿಹಾರಿಗಳ ಸಂಘ ಆರೋಪಿಸಿದೆ.
ಲಿಂಗಾಂಬುಧಿ ಕೆರೆ ಉಳಿವಿಗಾಗಿ ನಾವೇ ಹೋರಾಟ ಮಾಡಿದ್ದೇವೆ. ಇದು ಸಾರ್ವಜನಿಕ ಆಸ್ತಿ. ಇದರ ನಿರ್ವಹಣೆಯ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುವುದು ಖಂಡನೀಯ. ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಶುಲ್ಕ ಜಾರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ಮತ್ತು ಪ್ರತಿಭಟನೆ ನಡೆಸಲು ವಾಯುವಿಹಾರಿಗಳು ತೀರ್ಮಾನಿಸಿದ್ದಾರೆ.

