ಮೈಸೂರು: ನಾಡಿನ ಜನರಿಗೆ ಮಾತ್ರ ನಾನು ಭಯಪಡುತ್ತೇನೆಯೆ ಹೊರತು, ಲೂಟಿಕೋರರಿಗೆ ಅಥವಾ ಶ್ರೀಮಂತರಿಗೆ ಭಯಪಡುವ ಜಾಯಮಾನ ನನ್ನದಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಡಕ್ಕಾಗಿ ಹೇಳಿದರು.
ಮೈಸೂರು ತಾಲೂಕು ಜಯಪುರ ಹೋಬಳಿ, ಮರಟಿಕ್ಯಾತನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗಣಪತಿ, ಕಾಲಭೈರವೇಶ್ವರ ಸ್ವಾಮಿ, ಚಾಮುಂಡೇಶ್ವರಿ, ಆಂಜನೇಯ, ರಾಘವೇಂದ್ರ ಸ್ವಾಮಿ ಮತ್ತು ನವಗ್ರಹ ದೇವಾಲಯ ಹಾಗೂ ಆದಿಚುಂಚನಗಿರಿ ಮಠದ ದಿವಂಗತ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿಯನ್ನು ಉದ್ಘಾಟಿಸಿ ಹೆಚ್ ಡಿ ಕೆ ಮಾತನಾಡಿದರು.
ಮರಟಿಕ್ಯಾತನಹಳ್ಳಿ ನನ್ನ ಅಚ್ಚುಮೆಚ್ಚಿನ ಗ್ರಾಮ. ಈ ಗ್ರಾಮದೊಂದಿಗೆ ಜನ್ಮದ ಋಣಾನುಬಂಧವಿದೆ. ಈ ಗ್ರಾಮಕ್ಕೆ ಮೂರು ಬಾರಿ ಬಂದಿದ್ದೇನೆ. 2006ರ ಉಪಚುನಾವಣೆ ಪ್ರಚಾರಕ್ಕೆ ಬಂದಾಗ ಇಲ್ಲಿನ ಜನರು ತೋರಿದ ಪ್ರೀತಿ ಮರೆಯಲಾಗದು. ನಿಮ್ಮ ಗ್ರಾಮದಲ್ಲಿ ಯಾವುದೇ ತೊಂದರೆಯಾದರೂ ನಿಮ್ಮ ಪಾಲಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ನಾನು ಬಡವರು ಮತ್ತು ದೀನದಲಿತರಲ್ಲಿ ದೇವರನ್ನು ನೋಡುತ್ತೇನೆ. ನಾನು ಹಣ ಸಂಪಾದನೆ ಮಾಡಿಲ್ಲ, ಜನರನ್ನು ಸಂಪಾದನೆ ಮಾಡಿದ್ದೇನೆ. ನನ್ನ ತಾಯಿಗೆ ಈ ಗ್ರಾಮದಲ್ಲಿ ಸ್ಮರಣೀಯ ಪೂಜೆ ಸಲ್ಲಿಸಿದ್ದು ನನ್ನ ಪುಣ್ಯ. ನನ್ನ ತಾಯಿಯನ್ನು ನೆನೆಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ ಎಂದು ಹೇಳಿದರು
ಹುಣಸೂರು ಶಾಸಕ ಹರೀಶ್ ಗೌಡ ಅವರು ನಾನು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದಿದ್ದಾರೆ. ನನಗೆ ಅಧಿಕಾರಕ್ಕಿಂತ ನಾಡಿನ ಜನರ ಹಿತ ಮುಖ್ಯ. ಶಾಸಕರ ಬಲ ಕಡಿಮೆ ಇದ್ದರೂ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾನು ಹಳ್ಳಿಯ ಬಡತನ ನೋಡಿ ಅನುಭವಿಸಿದ್ದೇನೆ. ನೋವಿನಲ್ಲಿರುವವರನ್ನು ಕಂಡರೆ ಮನ ಕರಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಗ್ರಾಮದ ವ್ಯಕ್ತಿಯೊಬ್ಬರು ರಥದ ಚಕ್ರಕ್ಕೆ ಸಿಲುಕಿ ನೋವು ಅನುಭವಿಸುತ್ತಿದ್ದು, ಅವರ ಚಿಕಿತ್ಸೆ ಮತ್ತು ಜೀವನ ನಿರ್ವಹಣೆಗೆ ನಾನು ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಾನು ಜನರ ಧ್ವನಿಯಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತೇನೆ. ಯಾರಿಗೂ ಭಯಪಡುವುದಿಲ್ಲ. ಯುವಕರು ಮಚ್ಚು ಹಿಡಿದು ಬಡಿದಾಡುವ ಸಿನಿಮಾ ನೋಡಿ ಪ್ರೇರೇಪಿತರಾಗಬೇಡಿ. ನೇಗಿಲು ಹಿಡಿಯುವ ರೈತರಿಗೆ ಬೆಲೆ ಕೊಡಿ ಎಂದು ಹೆಚ್ ಡಿ ಕೆ ಕಿವಿಮಾತು ಹೇಳಿದರು.
ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ನಾಡಿನ ಜನರು ಕುಮಾರಣ್ಣ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಿದ್ದಾರೆ. 2028ರಲ್ಲಿ ಕುಮಾರಣ್ಣ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ತಿಳಿಸಿದರು.
ನಾಡು ಸುಭಿಕ್ಷವಾಗಿರಬೇಕಾದರೆ ಕುಮಾರಣ್ಣ ಸಿಎಂ ಆಗಬೇಕು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅವರು ಜಾರಿಗೊಳಿಸಿದ ಉಂಡುವಾಡಿ ಕುಡಿಯುವ ನೀರಿನ ಯೋಜನೆ ಕ್ಷೇತ್ರದ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಗ್ರಾಮಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ದೇವಾಲಯ ಆವರಣಕ್ಕೆ ಕರೆತರಲಾಯಿತು. ಕ್ರೇನ್ ಮೂಲಕ ಬೃಹತ್ ಹೂವು ಮತ್ತು ಹಣ್ಣಿನ ಹಾರ ಹಾಕಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಕೋಟೆಹುಂಡಿ ಮಹದೇವು, ಲಾಯರ್ ಸಿದ್ದರಾಜು, ವೆಂಕಟೇಶ್, ಸುರೇಶ್, ಶೇಖರ್, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

