ನಾಲಾಬೀದಿಯಲ್ಲಿ ಗಮನ ಸೆಳೆಯುತ್ತಿದೆ ರಾಘವೇಂದ್ರ ಸ್ವಾಮಿ ಮಾದರಿ ಗಣಪ

ಮೈಸೂರು: ಮೈಸೂರಿನ ನಾಲಾಬೀದಿಯ ಶ್ರೀ ಗಜಾನನ ಯುವಕರ ಭಕ್ತ ಮಂಡಳಿ ಪ್ರತಿಷ್ಠಾಪಿಸಿರುವ ವಿಭಿನ್ನ ಮಾದರಿ ಗಣಪ ಎಲ್ಲರ‌ ಗಮನ ಸೆಳೆಯುತ್ತಿದೆ.

ಮಂಡಳಿಯು ಕಳೆದ ನಾಲ್ಕು ವರ್ಷಗಳಿಂದ ಸಂಪ್ರದಾಯಕ್ಕಿಂತ ವಿಭಿನ್ನವಾಗಿ, ವಿಶಿಷ್ಟ ಪರಿಕಲ್ಪನೆಯಲ್ಲಿ ಗಣಪತಿ ಮೂರ್ತಿಯನ್ನು ಸಿದ್ಧಪಡಿಸಿ ಪೂಜಿಸುತ್ತಾ ಬಂದಿದೆ. ಈ ಹಿಂದೆ ಹಂಸ ಗಣಪತಿ, ಈಶ್ವರ ಗಣಪತಿ, ಅಯ್ಯಪ್ಪ ಗಣಪತಿ ಸೇರಿದಂತೆ ವಿವಿಧ ಅವತಾರಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಭಕ್ತರ ಮೆಚ್ಚುಗೆಗೆ ಪಾತ್ರವಾಗಿತ್ತು.

ಹಾಗೆಯೇ ಈ ಬಾರಿ ಗುರು ಶ್ರೀ ರಾಘವೇಂದ್ರ ಸ್ವಾಮಿಗಳ ಮಾದರಿಯಲ್ಲಿ ಗಣಪತಿ ಮೂರ್ತಿಯನ್ನು ಅತ್ಯಂತ ಆಕರ್ಷಕವಾಗಿ ಸಿದ್ಧಪಡಿಸಲಾಗಿದೆ. ಮೂರ್ತಿಯ ಹಿಂಭಾಗದಲ್ಲಿ ಬೃಂದಾವನವನ್ನು ಸಹ ವಿಶೇಷವಾಗಿ ನಿರ್ಮಿಸಲಾಗಿದ್ದು, ನೋಡುಗರ ಲ್ಲಿ ಭಕ್ತಿ ನೂರುಪಟ್ಟು ಹೆಚ್ಚಾಗಿದೆ.

ಈ ವಿಶೇಷ ಗಣಪತಿ ದರ್ಶನಕ್ಕೆ ಪ್ರತಿದಿನ ನೂರಾರು ಭಕ್ತರು ಆಗಮಿಸುತ್ತಿದ್ದು, ಯುವಕರ ಭಕ್ತಿ, ಶ್ರದ್ಧೆ ಮತ್ತು ಸೃಜನಶೀಲತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.