ಮೈಸೂರು: ಬಿಜೆಪಿಯವರು ರಣಹದ್ದುಗಳಿದ್ದಂತೆ, ಅವರು ಕೋಮುವಾದ ಸೃಷ್ಟಿಸಲು ಕಾಯುತ್ತಿರುತ್ತಾರೆ ಎಂದು ಸಚಿವ ಡಾ. ಯತೀಂದ್ರ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿ. ನರಸೀಪುರ ಗಣೇಶ ಮೆರವಣಿಗೆ ಕುರಿತು ಇನ್ಸ್‌ಪೆಕ್ಟರ್ ನೀಡಿರುವ ಹೇಳಿಕೆಯ ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿ,ಟಿ. ನರಸೀಪುರದ ವಿಡಿಯೋದಲ್ಲಿ ಇನ್ಸ್‌ಪೆಕ್ಟರ್ ಹೇಳಿರುವುದು ಸರಿಯಾಗಿದೆ. ಮಸೀದಿ, ಚರ್ಚ್ ಅಥವಾ ದೇವಸ್ಥಾನದ ಮುಂದೆ ಉದ್ದೇಶಪೂರ್ವಕವಾಗಿ ಪಟಾಕಿ ಸಿಡಿಸುವುದು ತಪ್ಪು. ಬೇರೆಯವರು ಬಂದು ದೇವಸ್ಥಾನದ ಮುಂದೆ ಪಟಾಕಿ ಹೊಡೆದರೆ ಅದು ಸರಿಯೇ ಎಂದು ಅವರು ಪ್ರಶ್ನಿಸಿದರು.
ಕಳೆದ ಬಾರಿ ಆಯೋಜಕರು ಅನುಮತಿ ಪಡೆಯದೆ ಆ ರಸ್ತೆಯಲ್ಲಿ ಮೆರವಣಿಗೆ ತೆರಳಿದ್ದರು. ಆಗ ಪೊಲೀಸ್ ಬಂದೋಬಸ್ತ್ ಇರಲಿಲ್ಲ. ಒಂದು ವೇಳೆ ಅಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಯಾರು ಹೊಣೆ? ಈ ಬಾರಿ ಪೊಲೀಸರು ಅನುಮತಿ ನೀಡಿ ನಿಗದಿತ ಮಾರ್ಗದಲ್ಲಿ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ರೈತರ ಸಮಸ್ಯೆ, ಬರದ ಬಗ್ಗೆ ಚರ್ಚೆ ಮಾಡಿ ಎಂದರೆ ಬಿಜೆಪಿಯವರು ಸದನಕ್ಕೆ ಬರುವುದಿಲ್ಲ, ಚರ್ಚೆ ಮಾಡುವುದಿಲ್ಲ. ಆದರೆ ಗಲಭೆ ಸೃಷ್ಟಿಸುವ ವಿಚಾರ ಸಿಕ್ಕರೆ ಸಾಕು ಅದನ್ನೇ ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ ಇದೇ ಅವರ ಕೆಲಸ ಎಂದು ಟೀಕಿಸಿದರು.
ಇನ್ಸ್‌ಪೆಕ್ಟರ್ ಅವರ ಪೂರ್ತಿ ವಿಡಿಯೋವನ್ನು ನಾನು ನೋಡಿದ್ದೇನೆ. ಅವರು ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಬದಲು ಗ್ರಹಚಾರ ಬಿಡಿಸುತ್ತೇನೆ ಎಂದಿದ್ದಾರೆ. ಬಿಜೆಪಿಯವರು ಸಸ್ಪೆಂಡ್ ಮಾಡಿ ಎಂದ ತಕ್ಷಣ ಸಸ್ಪೆಂಡ್ ಮಾಡಲು ಆಗುವುದಿಲ್ಲ. ಏನು ಮಾಡಬೇಕು ಎಂಬುದು ಸರ್ಕಾರಕ್ಕೆ ಗೊತ್ತಿದೆ. ಬಿಜೆಪಿಯವರು ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಮೈಸೂರಿನಲ್ಲಿ ನಮ್ಮ ತಾಯಿಯ ಆಸೆಯಂತೆ ಹೊಸ ಮನೆ ಕಟ್ಟಿಸಿದ್ದೇವೆ. ಮೊನ್ನೆಯಷ್ಟೇ ಗೃಹಪ್ರವೇಶವಾಗಿದೆ. ಹಿಂದೆ ಎರಡು ಮನೆ ಕಟ್ಟಿದ್ದೆವು ಆದರೆ ಒಂದು ದಿನವೂ ಉಳಿಯಲು ಆಗಲಿಲ್ಲ, ಎರಡನ್ನೂ ಮಾರಾಟ ಮಾಡಿದ್ದೆವು. ಈಗ ತಾಯಿಯ ಪ್ಲಾನ್‌ನಂತೆ ಈ ಮನೆ ನಿರ್ಮಿಸಿದ್ದೇವೆ. ತಂದೆಯವರು ವಾರದಲ್ಲಿ ಎರಡು ದಿನ ಮೈಸೂರಿನಲ್ಲೇ ಇರುತ್ತಾರೆ. ನಾನು ಕೂಡ ಮೈಸೂರಿಗೆ ಬಂದಾಗ ಇದೇ ಮನೆಯಲ್ಲಿ ತಂಗುತ್ತೇನೆ ಎಂದು ಇದೇ ವೇಳೆ ಸಚಿವ ಯತೀಂದ್ರ ತಿಳಿಸಿದರು.

