ಮೈಸೂರು: ಹೆಣ್ಣುಮಕ್ಕಳು ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಅಗಾಧ ಶಕ್ತಿಯನ್ನು ಹೊಂದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.
ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಮುಕ್ತ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಗುರಿ ಇಟ್ಟುಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಸಮಾಜ, ಕುಟುಂಬ ಏನೇ ಹೇಳಿದರೂ ಹೆಣ್ಣುಮಕ್ಕಳು ತಮ್ಮೊಳಗಿನ ಶಕ್ತಿಯನ್ನು ಗುರುತಿಸಿಕೊಳ್ಳಬೇಕು. ಕೇವಲ ಪದವಿ ಮುಗಿಸಿ ಮದುವೆಯಾಗಿ ಕುಟುಂಬದ ಸೇವೆಯಲ್ಲೇ ಜೀವನ ಮುಗಿಸುವುದಕ್ಕಿಂತ, ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕುತೂಹಲದ ಹಾದಿಯಲ್ಲಿ ಸಾಗಬೇಕು. ಕೊನೆವರೆಗೂ ನಮ್ಮೊಂದಿಗೆ ಉಳಿಯುವುದು ನಾವು ಗಳಿಸಿದ ಜ್ಞಾನ ಮತ್ತು ಅನುಭವ ಮಾತ್ರ. ಅದೇ ನಮ್ಮನ್ನು ಸಮಾಜದಲ್ಲಿ ಸ್ವಾವಲಂಬಿಯಾಗಿ ನಿಲ್ಲಿಸುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯರು ಎನ್‌ಎಸ್‌ಎಸ್, ಎನ್‌ಸಿಸಿ, ಕ್ರೀಡೆ, ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್‌ಕ್ರಾಸ್‌ನಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಾಯಕ ಹರ್ಷ ಮಾತನಾಡಿ,ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ’ ಎಂಬಂತೆ ಮಹಿಳೆಯರನ್ನು ಗೌರವಿಸುವಲ್ಲಿ ದೇವತೆಗಳು ನೆಲೆಸುತ್ತಾರೆ. ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುವ ಈ ಸಂಸ್ಥೆ ಪವಿತ್ರವಾದುದು. ಪ್ರತಿಯೊಬ್ಬರೂ ತಾಯಿ-ತಂದೆ ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ಶಿಕ್ಷಣ ಎಂದರೆ ಕೇವಲ ಜ್ಞಾನವಲ್ಲ, ಗಳಿಸಿದ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಬುದ್ಧಿ. ಕಲೆ, ಕ್ರೀಡೆಗಳು ಮನಸ್ಸು ಮತ್ತು ದೇಹವನ್ನು ಸದೃಢಗೊಳಿಸುತ್ತವೆ. ನಮ್ಮ ಸಂಸ್ಕೃತಿ, ಜಾನಪದ ಕಲೆ, ನಾಡು-ನುಡಿ ಹಾಗೂ ರೈತರು, ಯೋಧರನ್ನು ಗೌರವಿಸಬೇಕು. ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ಸನ್ಮಾರ್ಗದಲ್ಲಿ ಸಾಗಿದರೆ ಧರ್ಮ ನಮ್ಮನ್ನು ಕಾಯುತ್ತದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಕ್ರೀಡಾಪಟು ಯೋಗೇಂದ್ರ ಎಂ ಮಾತನಾಡಿ,ಕ್ರೀಡೆಗಳು ಕೇವಲ ಹವ್ಯಾಸವಲ್ಲ, ಅವು ಜೀವನಶೈಲಿಯ ಭಾಗ. ಕ್ರೀಡೆಯಿಂದ ಕ್ಯಾಲೋರಿ ಕರಗಿ, ಸ್ನಾಯು, ಮೂಳೆಗಳು ಬಲಗೊಳ್ಳುತ್ತವೆ. ನಿಯಮಿತ ವ್ಯಾಯಾಮ ಹೃದಯದ ಆರೋಗ್ಯಕ್ಕೆ ಸಹಕಾರಿ ಎಂದು ತಿಳಿಸಿದರು.
ಪ್ರಾಂಶುಪಾಲೆ ಡಾ. ರೇಣುಕಾ ಬಾಯಿ ವಿ. ಮಾತನಾಡಿ,ಸಾಧನೆಗೆ ಬಡತನ, ಜಾತಿ, ಧರ್ಮ ಅಡ್ಡಿಯಲ್ಲ. ವಿದ್ಯಾರ್ಥಿನಿಯರು ನಿರ್ದಿಷ್ಟ ಗುರಿ ಇಟ್ಟುಕೊಂಡು ದೃಢ ಸಂಕಲ್ಪದಿಂದ ಶ್ರಮಿಸಿದರೆ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಡಾ. ಮುತ್ತುರಾಜ ಎಸ್, ಖಜಾಂಚಿ ಡಾ. ಶಿಲ್ಪಾ ಹೆಚ್.ಆರ್, ಸಂಚಾಲಕಿ ರಜನಿ ಎಂ.ಎನ್, ಪತ್ರಾಂಕಿತ ವ್ಯವಸ್ಥಾಪಕಿ ಲಲಿತಕುಮಾರಿ, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

