ಮೈಸೂರು: ಪೌರಕಾರ್ಮಿಕರು ಸ್ವಚ್ಛ ಭಾರತ ಅಭಿಯಾನದ ನೈಜ ರಾಯಭಾರಿಗಳು ಹಾಗೂ ಸ್ವಚ್ಛತೆಯ ಅಸಲಿ ಶಿಲ್ಪಿಗಳು ಎಂದು
ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಣ್ಣಿಸಿದರು.
ಕರ್ನಾಟಕ ಕಲಾಮಂದಿರದಲ್ಲಿ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರಿಗೆ ಸ್ವಚ್ಛ ನಗರಿ ಎಂಬ ಹೆಸರು ಬಂದಿದ್ದರೆ ಅದಕ್ಕೆ ಪೌರಕಾರ್ಮಿಕ ಸಮುದಾಯದ ಕಠಿಣ ಪರಿಶ್ರಮವೇ ಮೂಲ ಕಾರಣ. ಈ ಸಮಾಜಕ್ಕೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು
ಅವರು ನುಡಿದರು.
ಸ್ವಚ್ಛ ಭಾರತ ಅಭಿಯಾನ ಮತ್ತು ಶೌಚಾಲಯಗಳ ನಿರ್ಮಾಣದಿಂದ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆಯಾಗಿದೆ.ಯುನಿಸೆಫ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ವರದಿಗಳ ಪ್ರಕಾರ, ಸ್ವಚ್ಛತೆಯಿಂದಾಗಿ ಭಾರತದಲ್ಲಿ ಶಿಶು ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಹೇಳಿದರು.
ಮೈಸೂರು ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ನಗರದ ಪಾರಂಪರಿಕ ಅರಮನೆ ಭಾಗವಷ್ಟೇ ಅಲ್ಲದೆ ರಿಂಗ್ ರಸ್ತೆ ಹಾಗೂ ಹೊರ ವಲಯಗಳಲ್ಲೂ ಸ್ವಚ್ಛತೆಯನ್ನು ಕಾಪಾಡುವುದು ಸವಾಲಾಗಿದೆ. ಮೈಸೂರು ಮಹಾನಗರ ಪಾಲಿಕೆಯನ್ನು ವಿಸ್ತರಿಸಿ ಗ್ರೇಟರ್ ಮೈಸೂರು ಮಾಡುವ ಅಗತ್ಯವಿದ್ದು, ಈ ಸ್ವಚ್ಛತೆಯ ಹಿರಿಮೆಯನ್ನು ಉಳಿಸಿಕೊಳ್ಳಲು ಸರ್ಕಾರದ ಬೆಂಬಲ ಹಾಗೂ ಹೆಚ್ಚುವರಿ ಸಿಬ್ಬಂದಿ ಅಗತ್ಯವಿದೆ ಎಂದು ಸಂಸದರು ತಿಳಿಸಿದರು.
ಸ್ವಚ್ಛತೆ ಎನ್ನುವುದು ಕೇವಲ ಪ್ರಶಸ್ತಿ ಅಥವಾ ಸ್ಪರ್ಧೆಗೆ ಸೀಮಿತವಾಗಬಾರದು. ದೇಶದ ಸಮಗ್ರ ಆರ್ಥಿಕ ಅಭಿವೃದ್ಧಿ ಹಾಗೂ ಜನರ ಉತ್ತಮ ಜೀವನಮಟ್ಟ ಕಾಯ್ದುಕೊಳ್ಳಲು ಸ್ವಚ್ಛತೆ ಅತ್ಯಗತ್ಯ. ಪ್ರಧಾನಮಂತ್ರಿಯವರ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸಲು ಸಮುದಾಯದ ಸಹಕಾರ ಮುಖ್ಯ ಎಂದು ಯದುವೀರ್ ಮನವಿ ಮಾಡಿದರು.
ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅವರು ಮಾತನಾಡಿ ಸಾಂಸ್ಕೃತಿಕ ನಗರಿ ಮೈಸೂರು ಇಡೀ ದೇಶದಲ್ಲೇ ಸ್ವಚ್ಛ ನಗರಿ ಎಂದು ಹೆಮ್ಮೆಯಿಂದ ಗುರುತಿಸಿಕೊಳ್ಳಲು ಪೌರಕಾರ್ಮಿಕರ ನಿರಂತರ ಪರಿಶ್ರಮವೇ ಮೂಲ ಕಾರಣ,ಬೆಳಗಿನ ಜಾವ ಸಾರ್ವಜನಿಕರು ಏಳುವ ಮುನ್ನವೇ ಕಷ್ಟಪಟ್ಟು ಕೆಲಸ ಪ್ರಾರಂಭಿಸುವ ಪೌರಕಾರ್ಮಿಕರು, ಮಳೆ-ಬಿಸಿಲೆನ್ನದೆ ತಮ್ಮ ಕರ್ತವ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಮೈಸೂರು ಕೇವಲ ಸಾಂಸ್ಕೃತಿಕ ಮತ್ತು ಪರಂಪರೆಯ ನಗರವಾಗಿಷ್ಟೇ ಅಲ್ಲದೆ ಕ್ಲೀನ್ ಸಿಟಿಯಾಗಿ ಹೆಸರುವಾಸಿಯಾಗಿದೆ. ಪ್ರಧಾನಮಂತ್ರಿಯವರು ಸೇರಿದಂತೆ ವಿದೇಶಿ ಗಣ್ಯರು ಹಾಗೂ ರಾಜ್ಯದ ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿದಾಗ ಮೈಸೂರಿನ ಸ್ವಚ್ಛತೆಯನ್ನು ಹೊಗಳಿ ಮಾತನಾಡಿದ್ದು, ಈ ಗೌರವವು ಪೌರಕಾರ್ಮಿಕರು, ಹೆಲ್ತ್ ಇನ್ಸ್‌ಪೆಕ್ಟರ್‌ಗಳು, ನೈರ್ಮಲ್ಯ ಮೇಲ್ವಿಚಾರಕರು ಹಾಗೂ ಪರಿಸರ ಎಂಜಿನಿಯರ್‌ಗಳ ಶ್ರಮಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಜಂಬೂಸವಾರಿ ದಿನದಂದು 8 ರಿಂದ 10 ಲಕ್ಷ ಜನರು ಸೇರುತ್ತಾರೆ. ರಸ್ತೆಗಳಲ್ಲೆಲ್ಲಾ ಕಸ ಬಿದ್ದಿದ್ದರೂ, ಕೇವಲ 2-3 ಗಂಟೆಗಳಲ್ಲಿ ಇಡೀ ರಸ್ತೆಗಳನ್ನು ರ‍್ಯಾಪಿಡ್ ಆಗಿ ಸ್ವಚ್ಛಗೊಳಿಸಿ ಹಳೆ ರೂಪಕ್ಕೆ ತರುವ ಪೌರಕಾರ್ಮಿಕರ ಕಾರ್ಯಕ್ಷಮತೆ ನಿಜಕ್ಕೂ ವಿಸ್ಮಯಕಾರಿ. ಪೌರಕಾರ್ಮಿಕರ ಆರೋಗ್ಯ, ರಕ್ಷಣಾ ಗ್ಲೌಸ್, ಮಾಸ್ಕ್ ಮುಂತಾದ ಅಗತ್ಯ ಸೌಲಭ್ಯಗಳ ಜೊತೆಗೆ, ಮೈಸೂರಿನ ರಿಂಗ್ ರೋಡ್ ಮತ್ತು ಕೆಸರೆಯಲ್ಲಿ ಪೌರಕಾರ್ಮಿಕರಿಗಾಗಿ ಸುಸಜ್ಜಿತ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯು ಪೌರಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಸದಾ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಮಹಾನಗರ ಪಾಲಿಕೆಯ ಆಯುಕ್ತರಾದ ಎಂ ಕೆ ಸವಿತಾ ಅವರು ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದ ಮೂಲಕ ನಗರದ ಸುಮಾರು 80 ಜಿವಿಪಿ ಕಸ ಬೀಳುವ ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ, ಪೌರಕಾರ್ಮಿಕರ ಶ್ರಮದಿಂದ ಯಶಸ್ವಿಯಾಗಿ ಕಸಮುಕ್ತ ಹಾಗೂ ತ್ಯಾಜ್ಯಮುಕ್ತ ಸ್ಥಳಗಳನ್ನಾಗಿ ಪರಿವರ್ತಿಸಲಾಗಿದೆ. ಪೌರಕಾರ್ಮಿಕರ ಆರೋಗ್ಯ ಮತ್ತು ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಉತ್ತಮ ಗುಣಮಟ್ಟದ ಗ್ಲೌಸ್, ಶೂ, ಮಾಸ್ಕ್ ಹಾಗೂ ಸಮವಸ್ತ್ರಗಳನ್ನು ಒದಗಿಸಲಾಗಿದೆ. ಇದರೊಂದಿಗೆ ವಿಮಾ ಸೌಲಭ್ಯಗಳನ್ನು ಸಹ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ವೀಣಾ, ಉಪ ಆಯುಕ್ತರಾದ ಶ್ರೀನಿವಾಸ್, ಕಂದಾಯ ಉಪ ಆಯುಕ್ತರಾದ ಸಿಂಧೂ, ದಾಸೇಗೌಡ, ನಗರದ ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಪುಷ್ಪವಲ್ಲಿ, ಮಾಜಿ ಮೇಯರ್ ನಾರಾಯಣ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ್, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

