ಚಾಮರಾಜನಗರ: ಯಡಿಯೂರಪ್ಪನವರು ಬಜೆಟ್ ಮೀರಿ ಯೋಜನೆಗಳ ಕಾಮಗಾರಿ ಪ್ರಾರಂಭಿಸಿದ್ದರು, ಬಿಜೆಪಿ ಸರ್ಕಾರಗಳ ಇಂತಹ ಅನಾಹುತಗಳಿಂದಾಗಿಯೇ ಆರ್ಥಿಕ ಇಲಾಖೆಯವರು ನಮಗೆ ಪತ್ರ ಬರೆದಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಚಾಮರಾಜನಗರ ಜಿಲ್ಲೆಯ ಹನೂರಿನ ಕೆಎಚ್ ಬಿ ಹೆಲಿಪ್ಯಾಡ್ ಬಳಿ ಶಿವಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
30 ಸಾವಿರ ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿಲ್ಲ ಎಂಬ ಗುತ್ತಿಗೆದಾರರ ಪತ್ರದ ಬಗ್ಗೆ ಕೇಳಿದ ಪ್ರಶ್ನೆಗೆ,ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಕೊಟ್ಟ ಕೆಲಸಗಳು ಮುಗಿಯುತ್ತಿದ್ದು, ಬಿಲ್ ನೀಡಬೇಕಾಗಿದೆ. ನಾನು ಅದರ ಬಗ್ಗೆ ಆಲೋಚನೆ ಮಾಡುವೆ. ಗುತ್ತಿಗೆದಾರರು ಉಳಿಯಬೇಕು. ಹೀಗಾಗಿ ಸಧ್ಯದಲ್ಲೇ ಆಲೋಚನೆ ಮಾಡುತ್ತೇನೆ ಎಂದು ತಿಳಿಸಿದರು.
ಈಗಲೂ ಪರ್ಸೆಂಟೇಜ್ ಕಮಿಷನ್ ನೀಡಬೇಕು ಎಂಬ ಗುತ್ತಿಗೆದಾರರ ಸಂಘದ ಅದ್ಯಕ್ಷರು ಆರೋಪ ಮಾಡಿರುವ ಬಗ್ಗೆ ಕೇಳಿದಾಗ,ಅವರು ಅಫಿಡವಿಟ್ ಸಲ್ಲಿಸಲಿ ತನಿಖೆ ಮಾಡಿಸಲಾಗುವುದು ಎಂದು ಉತ್ತರಿಸಿದರು.
490 ಕೋಟಿ ಮೊತ್ತದ ನೀರಾವರಿ ಯೋಜನೆ ಶಂಕುಸ್ಥಾಪನೆ ಯಾವಾಗ ಎಂದು ಕೇಳಿದ್ದಕ್ಕೆ ಈ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು. ಅನೇಕ ಸಮಿತಿಗಳಿದ್ದು, ಅಲ್ಲೂ ಚರ್ಚೆಯಾಗಬೇಕು. ನಂತರ ಮಂಡಳಿಗಳಲ್ಲಿ ಅನುಮತಿ ಪಡೆದು, ಸಚಿವ ಸಂಪುಟ ಅನುಮತಿ ಪಡೆದು ಟೆಂಡರ್ ಕರೆಯಬೇಕು. ಆ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಇದಕ್ಕೆ ಅನೇಕ ಪ್ರಕ್ರಿಯೆಗಳಿವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ಮಾಡಿದ್ದ ತಿದ್ದುಪಡಿ ರದ್ದು ಮಾಡಬೇಕು ಎಂದು ಬಿ ಆರ್ ಪಾಟೀಲ್ ಅವರು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ,ಈ ವಿಚಾರ ಪರಿಶೀಲನೆ ಮಾಡಲಾಗುವುದು ಎಂದು ಡಿ ಕೆಶಿ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮರುಪರಿಶೀಲನೆ ವೇಳೆ ಜಾತಿ ಪ್ರಮಾಣಪತ್ರ ಕೇಳುತ್ತಿರುವ ಬಗ್ಗೆ ಕೇಳಿದಾಗ, ಹೊರ ರಾಜ್ಯದವರು ಇಲ್ಲಿ ಯೋಜನೆ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ ನಾವು ಹೊಸ ಅರ್ಜಿ ಸಿದ್ಧಪಡಿಸಿದ್ದೇವೆ. ಯಾರು ನಮ್ಮ ಮತದಾರರು, ಅರ್ಹರಿದ್ದಾರೆ ಅವರನ್ನು ಪರಿಗಣಿಸಲಾಗುವುದು. ಇನ್ನು ನಾವು ಮರುಪರಿಶೀಲನೆ ಅರ್ಜಿ ವಿತರಣೆ ಮಾಡಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಸಿಡ್ಬ್ಲ್ಯೂಸಿ ಸಭೆಯಲ್ಲಿ ಎಸ್ಐಆರ್ ರದ್ಧತಿಗೆ ನಿರ್ಣಯ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ,ನಮ್ಮ ವಿರೋಧ ಒಂದು ಕಡೆ ಇರಲಿ, ಮೋದಿ ಸರ್ಕಾರ ನಿಯೋಜಿಸಿದ್ದ ಇನ್ನಿಬ್ಬರು ಆಯುಕ್ತರು ಕೆಲವು ನಿರ್ಧಾರಗಳ ಬಗ್ಗೆ ಅಪಸ್ವರ ಎತ್ತಿದ್ದರಲ್ಲ. ಆಯೋಗ ಪ್ರಜಾಸತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿ ತಪ್ಪುಗಳು ಆಗಿವೆ ಎಂಬುದು ಗೊತ್ತಾಗಿದೆ. ಜನರ ಭಾವನೆ, ಬಡವರು, ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯುವ ಕೆಲಸವಾಗುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಡಿ.ಕೆ ಶಿ ತಿಳಿಸಿದರು.
ಚಾಮರಾಜನಗರ ನನ್ನ ಪ್ರಿಯಾವಾದ ಸ್ಥಳ. ನನ್ನ ಕ್ಷೇತ್ರ ಇದರ ಜೊತೆ ಗಡಿ ಹಂಚಿಕೊಂಡಿದೆ. ಇದು ಹಸಿರಿನ ತಪ್ಪಲು, ಇಲ್ಲಿನ ಜನ ಶ್ರಮಜೀವಿಗಳು. ಕೃಷಿಯೇ ಅವರ ಬದುಕು. ಎಲ್ಲಾ ವರ್ಗದ ಜನರಿಗೆ ಆಶ್ರಯ ನೀಡಿರುವ ಪುಣ್ಯಭೂಮಿ. ಮಲೆ ಮಾದೇಶ್ವರನ ಇತಿಹಾಸದ ಭೂಮಿ. ಈ ಭಾಗಕ್ಕೆ ಸಂಸ್ಕಾರದ ಆಸ್ತಿ. ಈ ಭಾಗದ ಜನರ ನಂಬಿಕೆ. ನನ್ನ ಕ್ಷೇತ್ರದ ಮೂಲಕ ಸಾವಿರಾರು ಜನ ಪಾದಯಾತ್ರೆ ಮೂಲಕ ಕಾವೇರಿ ನದಿ ದಾಟಿ ಭಕ್ತಿಯಿಂದ ಈ ಧಾರ್ಮಿಕ ಕೇಂದ್ರಕ್ಕೆ ಬರುತ್ತಾರೆ ಎಂದು ಇದೇ ವೇಳೆ ಸಿಎಂ ಬಣ್ಣಿಸಿದರು.

