ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಸಾಂಸ್ಕೃತಿಕ ವೈಭವಕ್ಕೆ ಸಾಹಿತ್ಯದ ಮೆರಗು ನೀಡುವ ಉದ್ದೇಶದಿಂದ ದಸರಾ ಕವಿಗೋಷ್ಠಿ ಉಪಸಮಿತಿಯ ವತಿಯಿಂದ ಅಕ್ಟೋಬರ್ 13 ರಿಂದ 17 ರವರೆಗೆ ‘ದಸರಾ ಕವಿಗೋಷ್ಠಿ’ಯನ್ನು ಆಯೋಜಿಸಲಾಗಿದೆ.
ಈ ಕುರಿತು ದಸರಾ ಕವಿಗೋಷ್ಠಿ ಉಪಸಮಿತಿಯ ಉಪ ವಿಶೇಷಾಧಿಕಾರಿ ಡಾ. ಎಂ. ದಾಸೇಗೌಡ ಅವರು ಮಾಹಿತಿ ನೀಡಿದರು.
ಈ ಬಾರಿಯ ದಸರಾ ಕವಿಗೋಷ್ಠಿಯು ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನೆರವೇರಲಿದ್ದು, ಒಟ್ಟು ಐದು ವಿಭಿನ್ನ ಆಯಾಮಗಳಲ್ಲಿ ಅಂದರೆ ಚುಟುಕು-ಹಾಸ್ಯ, ಯುವ, ಚಿಗುರು, ಜನಪದ ಹಾಗೂ ಪ್ರಧಾನ ಕವಿಗೋಷ್ಠಿ ಮೂಡಿಬರಲಿದೆ ಎಂದು ಹೇಳಿದರು.
ಅಕ್ಟೋಬರ್ 13 ರಂದು ಚುಟುಕು ಮತ್ತು ಹಾಸ್ಯ ಕವಿಗೋಷ್ಠಿ ಹಿರಿಯ ಲೇಖಕಿ ವೈದೇಹಿ ಅವರಿಂದ ಉದ್ಘಾಟನೆಯಾಗಲಿದೆ, ಪ್ರಖ್ಯಾತ ಚಲನಚಿತ್ರ ನಟ ಡಾ. ಮುಖ್ಯಮಂತ್ರಿ ಚಂದ್ರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಸಿದ್ಧ ಲೇಖಕಿ ಡಾ. ಎಚ್.ಆರ್. ಸುಜಾತ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅ.14 ರಂದು ಯುವ ಕವಿಗೋಷ್ಠಿ ಪ್ರಸಿದ್ಧ ಕವಯತ್ರಿ ಡಾ. ಕೆ. ಷರೀಫಾ ಉದ್ಘಾಟಿಸಲಿದ್ದು, ಹಿರಿಯ ಕವಿ ಎಚ್. ಗೋವಿಂದಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಸತ್ಯಾನಂದ ಪಾತ್ರೋಟ ಮುಖ್ಯ ಅತಿಥಿಯಾಗಿ ಹಾಗೂ ಚಲನಚಿತ್ರ ಗೀತ ಸಾಹಿತಿ ಹೃದಯಶಿವ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಅ. 15 ರಂದು ಚಿಗುರು ಕವಿಗೋಷ್ಠಿ ಉದಯೋನ್ಮುಖ ಬರಹಗಾರರಿಗಾಗಿ ನಡೆಯುವ ಈ ಗೋಷ್ಠಿಯನ್ನು ಮಕ್ಕಳ ಸಾಹಿತಿ ಬಿಳಿಗಿರಿ ಕೃಷ್ಣಮೂರ್ತಿ ಉದ್ಘಾಟಿಸಲಿದ್ದು, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಕವಿತಾ ಕುಸುಗಲ್ ಮುಖ್ಯ ಅತಿಥಿಯಾಗಿ ಹಾಗೂ ಚಿಗುರು ಕವಿ ತಾನಿಷ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅ. 16 ರಂದು ಜನಪದ ಕಾವ್ಯಗೋಷ್ಠಿ ಯನ್ನು ಜಾನಪದ ವಿದ್ವಾಂಸ ಡಾ. ಪಿ.ಕೆ. ರಾಜಶೇಖರ ಉದ್ಘಾಟಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಡಾ. ರಾಜಪ್ಪ ದಳವಾಯಿ ಮುಖ್ಯ ಅತಿಥಿಗಳಾಗಿರಲಿದ್ದಾರೆ.
ಅ. 17 ರಂದು ಪ್ರಧಾನ ಕವಿಗೋಷ್ಠಿ ಹಿರಿಯ ಕವಯತ್ರಿ ಪ್ರತಿಭಾ ನಂದಕುಮಾರ್ ಉದ್ಘಾಟಿಸಲಿದ್ದು, ಹಿರಿಯ ಕವಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕವಿ ಹಾಗೂ ಸಂಸ್ಕೃತಿ ಚಿಂತಕ ಸುಬ್ಬು ಹೊಲೆಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಡಾ. ಎಂ. ದಾಸೇಗೌಡ ಅವರು
ತಿಳಿಸಿದರು.
ಈ ಬಾರಿ ಕಾರ್ಯಕ್ರಮದ ಮಹತ್ವವನ್ನು ಸಾರಲು ಕವಿಗೋಷ್ಠಿ ಪ್ರಚಾರ ತೇರಿಗೆ ಅಕ್ಟೋಬರ್ 5 ರಂದು ಬೆಳಿಗ್ಗೆ 11 ಗಂಟೆಗೆ ಚಾಲನೆ ನೀಡಲಾಗುವುದು. ಈ ವಾಹನವು ಮೈಸೂರಿನಾದ್ಯಂತ ಸಂಚರಿಸಲಿದೆ. ಸಮಾಜದ ವಿವಿಧ ವರ್ಗಗಳ ಕಾವ್ಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದರ ಜೊತೆಗೆ, ಬಹುರೂಪಿ ಕಾವ್ಯದೊಟ್ಟಿಗೆ ಪುಸ್ತಕ ಹಾಗೂ ಇತರ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ವೇಳೆ ದಸರಾ ಕವಿಗೋಷ್ಠಿಯ ಕಾರ್ಯಾಧ್ಯಕ್ಷರು ಪ್ರೊ ಎಂ ನಂಜಯ್ಯ ಹೊಂಗನೂರು, ಪ್ರೊ ತ್ರಿವೇಣಿ, ಉಮೇಶ್, ಗಾಯಕರಾದ ದಿವ್ಯ, ಆನಂದ್ ಮತ್ತಿತರರು ಉಪಸ್ಥಿತರಿದ್ದರು.

