ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿ ದರ್ಶನ

ಮೈಸೂರು, ಅ.2: ಎಚ್.ಡಿ. ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದ ಕಾಕನಕೋಟೆ ವ್ಯಾಪ್ತಿಯಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಬೆಳ್ಳಂಬೆಳಗ್ಗೆ ಅಪರೂಪದ ಹುಲಿ ದರ್ಶನವಾಗಿದ್ದು ಖುಷಿ ಪಟ್ಟಿದ್ದಾರೆ.

ಬೆಳಗಿನ ಸಫಾರಿ ವೇಳೆ ಟೈಗರ್ ಟ್ಯಾಂಕ್ ಬಳಿ ಒಂದು ಹೆಣ್ಣು ಹುಲಿ ಹಾಗೂ ನಾಂಜಿ ಕಟ್ಟೆ ಬಳಿ ಎರಡು ಹುಲಿಗಳು ಸೇರಿ ಒಟ್ಟು ಮೂರು ಹುಲಿಗಳು ಪ್ರವಾಸಿಗರ ಕಣ್ಣಿಗೆ ಬಿದ್ದಿವೆ. ಸಫಾರಿ ವಾಹನದ ಎದುರೇ ಆರಾಮವಾಗಿ ಓಡಾಡಿ ಪೋಸ್ ನೀಡಿದ ಹುಲಿಗಳನ್ನು ಕಂಡು ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆಹಿಡಿದು ರೋಮಾಂಚನಗೊಂಡಿದ್ದಾರೆ.

ರಜೆಯ ಮಜಾದಲ್ಲಿದ್ದ ಪ್ರವಾಸಿಗರಿಗೆ ಹುಲಿಗಳ ದರ್ಶನ ಅತೀವ ಸಂತಸ ತಂದಿದೆ. ಈ ಅಪರೂಪದ ದೃಶ್ಯವನ್ನು ಹಿರಿಯ ಛಾಯಾಗ್ರಾಹಕ ಜಿ.ಎಸ್. ರವಿಶಂಕರ್ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.