ದಸರಾ ಕ್ರೀಡಾಕೂಟ ವಿಜೇತರಿಗೆ ನಗದು ಬಹುಮಾನ ಹೆಚ್ಚಳ: ಡಿಸಿಎಂ ಡಾ. ಜಿ.‌ ಪರಮೇಶ್ವರ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ “ದಸರಾ ಕ್ರೀಡಾಕೂಟ ಸಿಎಂ ಕಪ್-2026” ಅನ್ನು ಕಂದಾಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು, ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನೂರಾರು ವರ್ಷಗಳ ಇತಿಹಾಸ ಹೊಂದಿರುವ ದಸರಾ ಉತ್ಸವದಲ್ಲಿ ಕ್ರೀಡೆಗೆ ಅಂದಿನ ವಿಜಯನಗರದ ಅರಸರೂ ಸೇರಿದಂತೆ ಮೈಸೂರಿನ ಅರಸರು ಪ್ರೋತ್ಸಾಹ ನೀಡುತ್ತಾ ಬಂದಿದ್ದರು. ಅದರಂತೆ ದಸರಾ ಕ್ರೀಡಾಕೂಟದ ವಿಜೇತ ಕ್ರೀಡಾಪಟುಗಳು ನಗದು ಬಹುಮಾನ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ನಮ್ಮ ಸರ್ಕಾರವು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಬೆಂಬಲ ನೀಡುತ್ತಿದೆ‌. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಚಿನ್ನದ ಪದಕ ವಿಜೇತರಿಗೆ 1 ಕೋಟಿ, ಬೆಳ್ಳಿ ಪದಕಕ್ಕೆ 75 ಲಕ್ಷ, ಕಂಚಿನ ಪದಕಕ್ಕೆ 50 ಲಕ್ಷ ರೂ. ಘೋಷಿಸಿದೆ. ಮುಂದಿನ ಎಲ್ಲಾ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ. 2 ರಷ್ಟು ಮೀಸಲಾತಿಯಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ಹೇಳಿದರು.

ಕ್ರೀಡಾಪಟು ತನ್ನ ಭವಿಷ್ಯವನ್ನು ತ್ಯಾಗಮಾಡಿ ಪದಕ ಗೆಲ್ಲಬೇಕು, ದೇಶಕ್ಕೆ ಗೌರವ ತರಬೇಕು ಎಂದು ಶ್ರಮ ಪಡುತ್ತಾರೆ‌. ನಾವು ನೀಡುವ ಪ್ರೋತ್ಸಾಹ ಹಣ ಅದಕ್ಕೆ ಬೆಲೆ ಕಟ್ಟಲಾಗದು. ಕ್ರೀಡೆಗೆ ಅನುಕೂಲವಾಗುವ ‌ನಿಟ್ಟಿನಲ್ಲಿ ಎಲ್ಲಾ ರೀತಿಯ ಮೂಲಸೌಕರ್ಯ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕರಾದ ತನ್ವೀರ್ ಸೇಠ್ ಅವರು ಅವರು ಮಾತನಾಡಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗೆ ಭಾಗವಹಿಸಲು ತರಬೇತಿ ಪಡೆಯುವ ಕ್ರೀಡಾಪಟುಗಳಿಗೆ ಜಿಲ್ಲಾ ಹಂತದಲ್ಲೇ ಉತ್ತಮ ಸೌಕರ್ಯ ಒದಗಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೇರಿಪಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಡಾ‌.ಕೆ.ಗೋವಿಂದರಾಜ್ ಅವರು ಮಾತನಾಡಿ, ಸರ್ಕಾರವು ಏಷ್ಯನ್ ಗೇಮ್ಸ್‌ನಲ್ಲಿ ವಿಜೇತರಿಗೆ ಗೌರವಧನ ಹೆಚ್ಚಿಸಿದ್ದು, ಉದ್ಯೋಗದಲ್ಲಿ ಶೇ.2 ರಷ್ಟು ಮೀಸಲಾತಿ ನೀಡುವ ಮೂಲಕ ಕ್ರೀಡಾಪಟುಗಳಮ್ನು ಪ್ರೋತ್ಸಾಹಿಸುತ್ತಿದೆ. ಈ ಕ್ರಮದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಉದ್ಯೋಗ ಅರಸಿಕೊಂಡು ವಲಸೆ ಹೋಗುವುದು ತಪ್ಪಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದಸರಾ ಕ್ರೀಡಾಕೂಟದ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಗಾಲ್ಫ್ ಕ್ರೀಡಾಪಟು ಪ್ರಣವಿ ಎಸ್. ಅರಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಪ್ಯಾರಾ ಅಥ್ಲೆಟಿಕ್ಸ್‌ ಕ್ರೀಡಾಪಟು ಶಿಲ್ಪಾ ಕೆ.ಎಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು, ಶಾಸಕರಾದ ಡಿ.ರವಿಶಂಕರ್ ಅವರು, ಅನಿಲ್ ಚಿಕ್ಕಮಾದು ಅವರು, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಮಾಚಯ್ಯ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್ ಅವರು, ಆಯುಕ್ತರಾದ ಎಂ.ಎನ್.ಅನುಚೇತ್ ಅವರು, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು, ಜಂಟಿ ನಿರ್ದೇಶಕರಾದ ಜಿತೇಂದ್ರ ಶೆಟ್ಟಿ ಅವರು, ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.