ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಸೆಸ್ಕ್; ನವಿಲು ವಿನ್ಯಾಸಕ್ಕಾಗಿ ಗಿನ್ನಿಸ್ ದಾಖಲೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ನಡೆಸಿದ ಡ್ರೋನ್ ಪ್ರದರ್ಶನ ಮತ್ತೆ ಗಿನ್ನಿಸ್ ದಾಖಲೆ ಮಾಡಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

2025ರ ದಸರಾ ಅಂಗವಾಗಿ ನಡೆದ ಡ್ರೋನ್ ಪ್ರದರ್ಶನದಲ್ಲಿ 2983 ಡ್ರೋನ್ ಗಳನ್ನು ಬಳಸಿಕೊಂಡು ರಾಷ್ಟ್ರೀಯ ಪ್ರಾಣಿ ಹುಲಿಯ ವಿನ್ಯಾಸವನ್ನು ರಚಿಸಿ ಗಿನ್ನಿಸ್ ದಾಖಲೆ ಬರೆದಿದ್ದ ಸೆಸ್ಕ್, ಈ ಬಾರಿ 3,473 ಡ್ರೋನ್ ಗಳ ಮೂಲಕ ನವಿಲು ಪಕ್ಷಿಯ ವಿನ್ಯಾಸ ಮೂಡಿಸುವ ಮೂಲಕ ಮತ್ತೊಂದು ಗಿನ್ನಿಸ್ ದಾಖಲೆಯನ್ನು ತನ್ನ ಮುಕುಟಕ್ಕೆ ಸೇರಿಸಿಕೊಂಡಿದೆ.

ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಡ್ರೋನ್ ಪ್ರದರ್ಶನದಲ್ಲಿ ಈ ನೂತನ ಸಾಧನೆ ದಾಖಲಾಗಿದೆ.

ಸಾವಿರಾರು ಡ್ರೋನ್ ಗಳು ಏಕಕಾಲದಲ್ಲಿ ಆಕಾಶದಲ್ಲಿ ವಿವಿಧ ಬಣ್ಣಗಳ ಬೆಳಕಿನೊಂದಿಗೆಎಸ ಅ ಸಂಯೋಜನೆಗೊಂಡು ರಾಷ್ಟ್ರೀಯ ಪಕ್ಷಿ ನವಿಲಿನ ವಿನ್ಯಾಸವನ್ನು ರಚಿಸಿದ್ದು, ಇಡೀ ಮೈದಾನದಲ್ಲಿ ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಒಟ್ಟು 12 ವಿನ್ಯಾಸಗಳಲ್ಲಿ 3,473 ಡ್ರೋನ್ ಗಳ ಮೂಲಕ ರಚಿಸಲಾದ ನವಿಲಿನ ವಿನ್ಯಾಸ, ಅತಿ ಹೆಚ್ಚು ಡ್ರೋನ್ ಗಳನ್ನು ಬಳಸಿಕೊಂಡು ರಚಿಸಲಾದ ಪಕ್ಷಿಯ ವಿನ್ಯಾಸವೆಂಬ ಹೆಗ್ಗಳಿಕೆಯೊಂದಿಗೆ ಗಿನ್ನಿಸ್ ದಾಖಲೆಯ ಪುಟ ಸೇರಿತು.

ಡ್ರೋನ್ ಪ್ರದರ್ಶನದ ನಂತರ ಲಂಡನ್ ನಿಂದ ಆಗಮಿಸಿದ್ದ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡದ ಸದಸ್ಯರು, ಸೆಸ್ಕ್ ವತಿಯಿಂದ ನಿರ್ಮಿಸಲಾದ ನೂತನ ಗಿನ್ನಿಸ್ ದಾಖಲೆಯನ್ನು ಅಧಿಕೃತವಾಗಿ ಘೋಷಿಸಿ, ಸೆಸ್ಕ್ ತಾಂತ್ರಿಕ ನಿರ್ದೇಶಕ ಎಲ್. ಲೋಕೇಶ್ ಹಾಗೂ ಇತರೆ ಅಧಿಕಾರಿಗಳಿಗೆ ಗಿನ್ನಿಸ್ ದಾಖಲೆಯ ಪ್ರಮಾಣ ಪತ್ರವನ್ನು ವಿತರಿಸಿದರು.

ಎರಡನೇ ದಿನದಂದು ನಡೆದ ಡ್ರೋನ್ ಪ್ರದರ್ಶನವೂ ಪ್ರೇಕ್ಷಕರನ್ನು ರಂಜಿಸಿತು. ಕಿಕ್ಕಿರಿದು ತುಂಬಿದ್ದ ಬನ್ನಿಮಂಟಪದ ಮೈದಾನದಲ್ಲಿ ನಡೆದ ಪ್ರದರ್ಶನವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆಕಾಶದಲ್ಲಿ ಮೂಡಿ ಬಂದ ಬಣ್ಣ ಬಣ್ಣದ ಡ್ರೋನ್ ಗಳ ಬೆಳಕಿನ ಚಿತ್ತಾರಗಳು ಪ್ರೇಕ್ಷಕರಲ್ಲಿ ಸಂಭ್ರಮ ಮೂಡಿಸಿತು.

ಇದಕ್ಕೂ ಮುನ್ನ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಮಣಿಕಾಂತ್ ಕದ್ರಿ, ಅನುರಾಧ ಭಟ್, ಬಾಲಿವುಡ್ ಗಾಯಕಿ ಹಂಸಿಕಾ ಅಯ್ಯರ್ ಅವರು ತಮ್ಮ ಮನಮೋಹಕ ಗಾಯನದ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದರು.

ಈ ಸಮಾರಂಭದಲ್ಲಿ ಶಾಸಕ ಡಿ. ರವಿಶಂಕರ್, ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಸೇರಿದಂತೆ ಸೆಸ್ಕ್ ಹಾಗೂ ಮುಡಾ ಅಧಿಕಾರಿಗಳು ಹಾಜರಿದ್ದರು.