ದಸರಾ ಸಂಭ್ರಮ: ಪೊಲೀಸ್ ಲಾಠಿ ಏಟಿಗೆ 4 ವರ್ಷದ ಮಗುಗೆ ತೀವ್ರ ಗಾಯ – ICU ನಲ್ಲಿ ಹೋರಾಟ

ಮೈಸೂರು: ವಿಶ್ವವೇ ಬೆರಗುಗಣ್ಣಿನಿಂದ ನೋಡುವ ನಮ್ಮ ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿ ವೈಭವದ ನಡುವೆಯೇ ಮನಕಲಕುವ ಘಟನೆಯೊಂದು ನಡೆದಿದೆ.

ಹೈವೇ ಸರ್ಕಲ್ ಬಳಿ ಜನಸಾಗರದ ನಡುವೆ ಪೋಷಕರ ಬೆರಳು ಹಿಡಿದು ದಸರಾ ನೋಡಲು ಬಂದಿದ್ದ 4 ವರ್ಷದ ಪುಟ್ಟ ಕಂದನ ತಲೆಗೆ ಲಾಠಿ ಪೆಟ್ಟು ಬಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಈಗ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿ ದ್ದಾನೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅವರ ಆರೋಪದ ಪ್ರಕಾರ ನಿನ್ನೆ ಸಂಜೆ ಜಂಬೂಸವಾರಿ ಮೆರವಣಿಗೆ ವೇಳೆ ಹೈವೇ ಸರ್ಕಲ್ ಬಳಿ ಜನದಟ್ಟಣೆ ನಿಯಂತ್ರಿಸುತ್ತಿದ್ದ ಪೊಲೀಸರು ಏಕಾಏಕಿ ಲಾಠಿ ಬೀಸಿದ್ದಾರೆ. ಆ ವೇಳೆ ಪಕ್ಕದಲ್ಲೇ ನಿಂತಿದ್ದ ಪುಟ್ಟ ಮಗುವಿನ ಮೃದು ತಲೆಗೆ ಲಾಠಿಯ ತುದಿ ಬಡಿದಿದೆ.

ಏಟಿನ ರಭಸಕ್ಕೆ ಮಗುವಿನ ತಲೆಯಿಂದ ರಕ್ತ ಚಿಮ್ಮಿದೆ. ಗಾಬರಿಗೊಂಡ ಪೋಷಕರು ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಓಡಿದ್ದಾರೆ. ಸದ್ಯ ಮಗುವಿಗೆ ತಲೆಗೆ ಗಂಭೀರ ಗಾಯವಾಗಿದ್ದು, ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿ ದ್ದಾರೆ. ಮಗುವಿನ ತಲೆಗೆ ಹೊಲಿಗೆ ಹಾಕಿರುವ ಹೃದಯ ವಿದ್ರಾವಕ ಫೋಟೋ ಈಗ ಎಲ್ಲರ ಕಣ್ಣಂಚಿನಲ್ಲಿ ನೀರು ತರಿಸುತ್ತಿದೆ.

“ದಸರಾ ನೋಡಲು ಕರೆದುಕೊಂಡು ಬಂದೆವು, ಆದರೆ ಮಗು ರಕ್ತದಲ್ಲಿ ಬಿದ್ದಿದ್ದನ್ನು ನೋಡಲಾಗಲಿಲ್ಲ. ಪುಟ್ಟ ಮಗುವಿಗೆ ಲಾಠಿ ಬೀಸಬೇಕಿತ್ತಾ?” ಎಂದು ಮಗುವಿನ ತಾಯಿ ಕಣ್ಣೀರು ಹಾಕುತ್ತಾ ಪ್ರಶ್ನಿಸಿದ್ದಾರೆ.

ಇದು ಆಕಸ್ಮಿಕವೋ ಅಥವಾ ಪೊಲೀಸರ ನಿರ್ಲಕ್ಷ್ಯವೋ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.

ಈ ಸಂಬಂಧ ಮಗುವಿನ ಕುಟುಂಬಸ್ಥರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.

ಪೊಲೀಸ್ ಆಯುಕ್ತರು ಈ ಬಗ್ಗೆ ತನಿಖೆಗೆ ಆದೇಶಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದಸರಾ ಸಂಭ್ರಮದ ನಡುವೆ ಅಮಾಯಕ ಕಂದನ ರೋದನ ಎಲ್ಲರ ಮನಸ್ಸನ್ನು ಕಲಕಿದೆ.